ಉತ್ತರ ಪ್ರದೇಶ: ವಿಷಕಾರಿ ಅನಿಲ ಸೋರಿಕೆಯಿಂದಾಗಿ ಮೂರು ಮಕ್ಕಳು, ನಾಲ್ವರು ಕಾರ್ಮಿಕರು ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದ ಬಿಸ್ವಾನ್ ಪ್ರದೇಶದ ಜಲಾಲ್‌ಪುರ ಗ್ರಾಮದ ಕಾರ್ಪೆಟ್ ಕಾರ್ಖಾನೆಯಲ್ಲಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಲಕ್ನೋದಿಂದ ತನಿಖೆಗಾಗಿ ತಜ್ಞರ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡ ಆಗಮಿಸಿದೆ. ಕಾರ್ಖಾನೆಯ ಸುತ್ತಲಿನ ಪ್ರದೇಶದಲ್ಲಿ ಕೆಲವು ಶ್ವಾನಗಳೂ ಸಹ ಮೃತಪಟ್ಟಿರುವುದು ಕಂಡುಬಂದಿದೆ. ಕಾರ್ಪೆಟ್ ಕಾರ್ಖಾನೆ ಪಕ್ಕದಲ್ಲಿ ಆ್ಯಸಿಡ್ ಘಟಕವೂ ಇದ್ದು, ಇಲ್ಲಿದ್ದ ಟ್ಯಾಂಕರ್ ಸೋರಿಕೆಯಾಗಿ ಘಟನೆ ನಡೆದಿರಬಹುದು. ಆದರೆ ತನಿಖೆ ಬಳಿಕವೇ ದುರಂತಕ್ಕೆ ಖಚಿತ ಕಾರಣ ತಿಳಿಯಲಿದೆ ಎಂದು ಬಿಸ್ವಾನ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಸುರೇಶ್ ಕುಮಾರ್ ತಿಳಿಸಿದ್ದಾರೆ.
ಏಳು ಮಂದಿ ಮೃತರಲ್ಲಿ ಮೂವರು ಮಕ್ಕಳು ಸೇರಿ ಐವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೃತರನ್ನು ಆತಿಕ್ (45), ಅವರ ಪತ್ನಿ ಸೈರಾ (42), ಅವರ ಮಕ್ಕಳಾದ ಆಯೇಶಾ (12), ಅಫ್ರೋಜ್ (8), ಫೈಸಲ್ (2) ಹಾಗೂ ಇನ್ನಿಬ್ಬರನ್ನು ಮೋಟು (75), ಪಹಲ್ವಾನ್ (70) ಎಂದು ಗುರುತಿಸಲಾಗಿದೆ.
ಮೃತರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 4 ಲಕ್ಷ ರೂ. ಪರಿಹಾರ ಹಣ ಘೋಷಿಸಿದ್ದಾರೆ.