ನವದೆಹಲಿ: ಕೊರೊನಾ ಪ್ರಭಾವವಿದ್ದರೂ ಸೆಪ್ಟೆಂಬರ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಸಗಟು ವ್ಯಾಪಾರದಲ್ಲಿ ಶೇ 26.45ರಷ್ಟು ಹೆಚ್ಚಾಗಿದ್ದು 2,72,027 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷ ಇದೇ ತಿಂಗಳಲ್ಲಿ 2,15,124 ವಾಹನಗಳು ಮಾರಾಟವಾಗಿವೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ (ಎಸ್ಐಎಎಂ) ಮಾಹಿತಿ ನೀಡಿದೆ.
ಎಸ್ಐಎಎಂನ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳಂತೆ ದ್ವಿಚಕ್ರವಾಹನಗಳ ಮಾರಾಟವೂ ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಶೇ 11.64ರಷ್ಟು ಏರಿಕೆ ಕಂಡಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ 18,49,546 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, ಹಿಂದಿನ ವರ್ಷ ಇದೇ ತಿಂಗಳು 16,56,658 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.
ಸೆಪ್ಟೆಂಬರ್ 2020ರಲ್ಲಿ 12,24,117 ಮೋಟಾರ್ ಸೈಕಲ್ಗಳು ಮಾರಾಟವಾಗಿ ಶೇ 17.3ರಷ್ಟು ಹೆಚ್ಚಳ ಕಂಡಿವೆ. ಹಿಂದಿನ ವರ್ಷ ಇದೇ ತಿಂಗಳು 10,43,621 ಮೋಟಾರ್ ಸೈಕಲ್ಗಳು ಮಾರಾಟವಾಗಿದ್ದವು.
ಸ್ಕೂಟರ್ಗಳ ಮಾರಾಟವೂ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದ್ದು ಈ ವರ್ಷ 5,56,205 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷ ಇದೇ ತಿಂಗಳಲ್ಲಿ 5,55,754 ಮಾರಾಟವಾಗಿದ್ದವು.
ಈ ವರ್ಷದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ 17.02ರಷ್ಟು ಹೆಚ್ಚಳವಾಗಿದ್ದು, ಈ ವರ್ಷ 7,26,232 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷ ಈ ತ್ರೈಮಾಸಿಕದಲ್ಲಿ 6,20,620 ವಾಹನಗಳು ಮಾರಾಟವಾಗಿವೆ.
ಈ ವರ್ಷದ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದ್ವಿಚಕ್ರವಾಹನಗಳು 46,90,565 ಮಾರಾಟವಾಗಿದ್ದು, 2019ರಲ್ಲಿ 46,82,571 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.
ಇದೆಲ್ಲಕ್ಕೂ ಭಿನ್ನವಾಗಿ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 20.13ರಷ್ಟು ಇಳಿಕೆಯಾಗಿದ್ದು, ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,33,524 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷ 1,67,173 ವಾಹನಗಳು ಮಾರಾಟವಾಗಿದ್ದವು.