ಚೆನ್ನೈ: ಕೋವಿಡ್ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಲು ಆದೇಶಿಸಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ.
ಪರೀಕ್ಷೆಗಳನ್ನು ನಡೆಸುವ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಮಾರ್ಗದರ್ಶನದ ಮೇರೆಗೆ ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿಯ ಕಲೆ, ವಿಜ್ಞಾನ, ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.
ಜುಲೈ 6 ರಂದು ಟರ್ಮಿನಲ್ ಸೆಮಿಸ್ಟರ್ ಮತ್ತು ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ಕುರಿತು ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಬಳಿಕ ರಾಷ್ಟ್ರದಾದ್ಯಂತ 755 ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ನಡೆಸುವ ಸ್ಥಿತಿಗತಿಯ ಬಗ್ಗೆ ಯುಜಿಸಿ ಮಾಹಿತಿ ನೀಡಿವೆ.