ಹೈದರಾಬಾದ್: 2014ರಲ್ಲಿ ಭಾರತದ ಒಟ್ಟು ರಕ್ಷಣಾ ಸಾಮಗ್ರಿ ರಫ್ತು ಪ್ರಮಾಣ ಸುಮಾರು 2,000 ಕೋಟಿ ರೂಪಾಯಿ ಆಗಿತ್ತು. ಆದರೆ, ಕಳೆದ 2 ವರ್ಷಗಳಲ್ಲಿ ನಾವು ಈ ನಿಟ್ಟಿನಲ್ಲಿ ಭಾರಿ ಪ್ರಗತಿ ಸಾಧಿಸಿದ್ದೇವೆ. ಈ ಎರಡು ವರ್ಷಗಳ ಅವಧಿಯಲ್ಲಿ ದೇಶ ಸುಮಾರು 17,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನಗಳನ್ನು ನಾನಾ ದೇಶಗಳಿಗೆ ರಫ್ತು ಮಾಡಿದ್ದೇವೆ.
ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ರಕ್ಷಣಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಐದು ವರ್ಷಗಳಲ್ಲಿ ದೇಶದ ರಕ್ಷಣಾ ಸಾಮಗ್ರಿಗಳ ರಪ್ತು 35,000 ಕೋಟಿ ರೂಗಳನ್ನು ತಲುಪುವ ಗುರಿ ಹೊಂದಿದೆ ಎಂದು ಘೋಷಿಸಿದ್ದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಇದೇ ಗುರಿಯನ್ನು ಪುನರುಚ್ಚರಿಸಿದ್ದಾರೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸಲು, ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲೇ ಇತ್ತೀಚಿಗೆ ರಕ್ಷಣಾ ಸಚಿವಾಲಯ (ಎಂಒಡಿ) 75ಕ್ಕೂ ಹೆಚ್ಚು ದೇಶಗಳ 200 ರಾಯಭಾರಿಗಳನ್ನು ಒಳಗೊಂಡ ಒಂದು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ತನಗೆ ಅಗತ್ಯವಾದ ಅತ್ಯಾಧುನಿಕ ಹೈ- ಟೆಕ್ ಸೇನಾ ರಕ್ಷಣೋಪಕರಣಗಳ ಪೈಕಿ ಶೇ 70ರಷ್ಟನ್ನು ಭಾರತ ದೇಶವು ಈವರೆಗೆ, ರಷ್ಯಾ, ಜಪಾನ್, ಇಸ್ರೇಲ್ ಮತ್ತು ಯುಎಸ್ ನಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ 2014 ರಲ್ಲಿ ತಾವು ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನಿ ಮೋದಿ ಅವರು ರಕ್ಷಣಾ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ.
ಈ ಸುಧಾರಣೆಗಳು, ಇಂದು ದೇಶೀಯವಾಗಿ, ರಕ್ಷಣೋಪಕರಣಗಳ ಬಿಡಿಭಾಗಗಳು, ಘಟಕಗಳು ಮತ್ತು ಉಪ ಉತ್ಪಾದನೆಗೆ ಅನುವು ಮಾಡಿಕೊಡುತ್ತಿದೆ. 2014ರ ಹೊತ್ತಿಗೆ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ 210 ಪರವಾನಗಿಗಳನ್ನು ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕ್ಷೇತ್ರದಲ್ಲಿ ನೀಡಿತ್ತು.
ಈ ಪರವಾನಗಿಗಳ ಸಂಖ್ಯೆ ಕಳೆದ 5 ವರ್ಷಗಳಲ್ಲಿ, 460ಕ್ಕೆ ಏರಿತು. ವಿಶ್ವದ 2ನೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿದ್ದರೂ, ರಫ್ತುದಾರರ ಪಟ್ಟಿಯಲ್ಲಿ ಭಾರತ 23 ನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ಆತ್ಮನಿರ್ಭರ ಭಾರತ್ ಪ್ಯಾಕೇಜಿನ ಭಾಗವಾಗಿ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 ಕರಡು ಈ ಪರಿಸ್ಥಿತಿಗೆ ಮಂಗಳ ಹಾಡಲು ದೃಢ ನಿರ್ಧಾರ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಬಳಿಕ, ದೇಶವು ಮೇಕ್ ಇನ್ ಇಂಡಿಯಾದ ಮೂಲಕ ಈ ಬಗ್ಗೆ ಪ್ರಯತ್ನಿಸಬೇಕಿದೆ. ಸೇನಾ ಸಾಮಗ್ರಿಗಳ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಉನ್ನತ ಗುಣಮಟ್ಟದ ರಕ್ಷಣಾ ಸಾಧನಗಳನ್ನು ತಯಾರಿಸಲು ಕೇಂದ್ರವು ವಿಶೇಷ ಒತ್ತು ನೀಡಬೇಕು.
ರಕ್ಷಣಾ ಸಾಮಗ್ರಿಗಳ ಕ್ಷೇತ್ರದಲ್ಲಿ, ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ, ರಕ್ಷಣಾ ಕ್ಷೇತ್ರದಲ್ಲಿ ಸ್ವಯಂ ಚಾಲಿತ ಮಾರ್ಗದಲ್ಲಿ ಶೇಕಡಾ 74 ರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ, ರಕ್ಷಣಾ ಉಪಕರಣ ಖರೀದಿ ಕರಡು ಅನಾವರಣಗೊಳಿಸಿತು. ಈ ಕರಡಿನಲ್ಲಿ, ಯುದ್ಧನೌಕೆಗಳು ಮತ್ತು ಸಾರಿಗೆ ವಿಮಾನಗಳಂತಹ ಉಪಕರಣಗಳನ್ನು ಗುತ್ತಿಗೆಗೆ ನೀಡಲು ಅವಕಾಶ ನೀಡಲಾಗಿದೆ.
ಈ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಲು, ಕೇಂದ್ರ ರಕ್ಷಣಾ ಸಚಿವಾಲಯ, 101 ವಸ್ತುಗಳ ಆಮದಿನ ಮೇಲೆ ನಿಷೇದ ಹೇರಲು ನಿರ್ಧರಿಸಿದ್ದು, ಈ ೧೦೧ ವಸ್ತುಗಳ ಪಟ್ಟಿ ಸಿದ್ದಗೊಂಡಿದೆ. ಈ ನಿರ್ಬಂಧವನ್ನು ಹಂತ ಹಂತವಾಗಿ, 2020 ಮತ್ತು 2024 ರ ನಡುವೆ ಜಾರಿಗೆ ತರಲು ಯೋಜಿಸಲಾಗಿದೆ. ದೇಶದಲ್ಲಿ ಹತ್ತಾರು, ರಕ್ಷಣಾ ಸಾಮಗ್ರಿ ಉತ್ಪನ್ನ ಕಾರ್ಖಾನೆಗಳು, ಸರ್ಕಾರಿ ರಕ್ಷಣಾ ಸಂಸ್ಥೆಗಳು ಮತ್ತು ಡಿಆರ್‌ಡಿಒ ಪ್ರಯೋಗಾಲಯಗಳಿದ್ದರು, ದೇಶದ ರಕ್ಷಣಾ ಉಪಕರಣಗಳ ಕ್ಷೇತ್ರಕ್ಕೆ ಅವುಗಳ ಕಾಣಿಕೆ ಬಹಳ ಕಡಿಮೆ.
1992ರಲ್ಲಿ, ರಕ್ಷಣಾ ಸಚಿವರ ಅಂದಿನ ವೈಜ್ಞಾನಿಕ ಸಲಹೆಗಾರ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಈ ಪರಿಸ್ಥಿತಿ ಬದಲಾಯಿಸಲು ಚಿಂತನೆ ನಡೆಸಲಾಯಿತು. ಮುಂದಿನ 10 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಯೋಜನೆ ರೂಪಿಸಲಾಯಿತು. ಕಲಾಂ ಅವರು ದೇಶದ ರಕ್ಷಣಾ ಉತ್ಪಾದನೆಯನ್ನು ಅಭಿವೃದ್ಧಿಪಡಿಸಲು ಹಲವು ಸಲಹೆ ನೀಡಿದ್ದರು. ಆದರೆ ಈ ಸಲಹೆಗಳನ್ನು ನಂತರದ ಸರ್ಕಾರಗಳು ಕಡೆಗಣಿಸಿದವು.
ಆದರೆ, ತಡವಾಗಿಯಾದರೂ ಈಗ ಸರಕಾರ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕು. ರಕ್ಷಣಾ ಉತ್ಪನ್ನ ಉತ್ಪಾದನೆ ಮತ್ತು ರಫ್ತು ಕ್ಷೇತ್ರದಲ್ಲಿ ಮುಂದಡಿ ಇಡಲು ಪರಿಣಾಮಕಾರಿಯಾದ ಕಾರ್ಯತಂತ್ರಗಳನ್ನು ಕೇಂದ್ರ ಸರಕಾರ ಜಾರಿಗೆ ತರಬೇಕು. ರಪ್ತು ವ್ಯವಹಾರ ಪೂರಕ ನೀತಿ ಮೂಲಕ, ಮತ್ತು ಅಧಿಕಾರಶಾಹಿ ಕೆಂಪು ಪಟ್ಟಿಯನ್ನು ಈ ಕ್ಷೇತ್ರದಿಂದ ಕಿತ್ತೊಗೆಯುವ ಮೂಲಕ, ಸರ್ಕಾರವು ದೇಶದ ರಕ್ಷಣಾ ಉತ್ಪನ್ನ ತಯಾರಿ ಕ್ಷೇತ್ರದಲ್ಲಿ ಸಾಗರೋತ್ತರ ಹೂಡಿಕೆಗಳನ್ನು ಗರಿಷ್ಠಗೊಳಿಸಬಹುದು. ಈ ಮೂಲಕ ರಕ್ಷಣೆಯಲ್ಲಿ ಸ್ವಾವಲಂಬನೆಯ ಕನಸನ್ನು ನನಸಾಗಿಸಲು ನಮ್ಮ ದೇಶಕ್ಕೆ ಇದು ಒಂದು ರಾಜ ಮಾರ್ಗವಾಗಿದೆ.