ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಸೆಕ್ಯೂರಿಟಿ ಗಾರ್ಡ್ ಒಬ್ಬ ತನ್ನ ಅಕ್ರಮ ಕೆಲಸದ ಬಗ್ಗೆ ತಿಳಿದುಕೊಂಡವರನ್ನ ವಿಷಕೊಟ್ಟು ಕೊಲೆ ಮಾಡುತ್ತಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.
ಅಕ್ಟೋಬರ್ 16ರಂದು ಎಲೂರಿನಲ್ಲಿ ವ್ಯಾಯಾಮ ಶಿಕ್ಷಕ (ಪಿಟಿ ಮಾಸ್ಟರ್) ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆತನ ಸಾವಿಗೆ ವಿಷ ಪ್ರಯೋಗ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸೆಕ್ಯೂರಿಟಿ ಗಾರ್ಡ್ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಹೊರ ಬಂದಿದೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿ ಸೆಕ್ಯೂರಿಟಿ ಗಾರ್ಡ್ ಈ ಹಿಂದೆ ಮಾಡಿರುವ ಕೊಲೆಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಎಲೂರಿನಲ್ಲಿ ಮೂರು, ಪೂರ್ವ ಗೋದಾವರಿ ಜಿಲ್ಲೆಯ ರಾಜ ಮಹೇಂದ್ರವರಂನ ಬೊಮ್ಮೂರು ವ್ಯಾಪ್ತಿಯಲ್ಲಿ ನಾಲ್ಕು, ಕೃಷ್ಣಾ ಜಿಲ್ಲೆಯಲ್ಲಿ ಒಬ್ಬರನ್ನು ಸೇರಿ ಒಟ್ಟು ಎಂಟು ಜನರನ್ನು ಕೊಲೆ ಮಾಡಿರುವುದಾಗಿ ಆರೋಪಿ ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾನೆ.
ಕೊಲೆಗೆ ಕಾರಣವೇನು?
ಆರೋಪಿ ಸೆಕ್ಯೂರಿಟಿ ಗಾರ್ಡ್ ವಿಶೇಷ ನಾಣ್ಯ, ಎರಡು ತಲೆಗಳ ಹಾವುಗಳ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡುತ್ತಿದ್ದನು. ಈ ಮೋಸದ ಬಗ್ಗೆ ತಿಳಿದವರನ್ನು ಅಜ್ಞಾತ ಸ್ಥಳಕ್ಕೆ ಕರೆಸಿ ತಂಪು ಪಾನಿಯಗಳಲ್ಲಿ ವಿಷ ನೀಡಿ ಕೊಲೆ ಮಾಡುತ್ತಿದ್ದನು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.