ದಂತೇವಾಡ (ಛತ್ತೀಸ್ಘಡ): ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 4 ಕೆಜಿ ತೂಕದ ಪ್ರಬಲ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಪಾಂಚಾಲಿ ಗ್ರಾಮದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಐಇಡಿ ಬಾಂಬ್ ಪತ್ತೆಯಾಗಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸ್ಫೋಟಕವನ್ನು ಉಕ್ಕಿನ ಪಾತ್ರೆಯಲ್ಲಿ ಇರಿಸಲಾಗಿದ್ದು, ಅದನ್ನು ನೆಲದ ಕೆಳಗೆ ಹೂಳಲಾಗಿತ್ತು.
ಪುಲ್ವಾಮಾದಲ್ಲಿ ಐಇಡಿ ಸ್ಫೋಟ:
ಇದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ನಡೆದ ಐಇಡಿ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಓರ್ವ ಯೋಧ ಗಾಯಗೊಂಡಿದ್ದಾರೆ.
ಸಿಆರ್‌ಪಿಎಫ್ ಬೆಂಗಾವಲು ಪಡೆ ದಕ್ಷಿಣ ಕಾಶ್ಮೀರದ ಗಂಗೂ ಗ್ರಾಮದ ಮೂಲಕ ಹಾದುಹೋದ ಕೆಲವೇ ಕ್ಷಣಗಳಲ್ಲಿ ಸುಧಾರಿತ ಸ್ಫೋಟಕ ಸಾಧನ ಕಡಿಮೆ-ತೀವ್ರತೆಯಲ್ಲಿ ಸ್ಫೋಟಗೊಂಡಿದೆ. ಇದನ್ನು ಶಂಕಿತ ಭಯೋತ್ಪಾದಕರು ನಡೆಸಿದ್ದಾರೆ ಎನ್ನಲಾಗ್ತಿದೆ.