ನವದೆಹಲಿ: ಜಾಗತಿಕ ಮಹಾಮಾರಿ ಕೋವಿಡ್ಗೆ ಲಸಿಕೆ ಕಂಡುಹಿಡಿಯಲು ಭಾರತ ಹಾಗೂ ಅಮೆರಿಕಾ ಸತತ ಪ್ರಯತ್ನಗಳನ್ನು ಮಾಡುತ್ತಿದ್ದು, ಸದ್ಯದಲ್ಲೇ ಸೋಂಕಿಗೆ ಔಷಧಿ ದೊರೆಯುವ ನಿರೀಕ್ಷೆಯಿದೆ.
ಸೋಂಕಿಗೆ ಲಸಿಕೆ ಕಂಡುಹಿಡಿಯುವ ಕಾರ್ಯದಲ್ಲಿ ಅಮೆರಿಕಾ ಮಹತ್ತರ ಪ್ರಗತಿ ಸಾಧಿಸಿದ್ದು, ಈ ಕುರಿತು ಶೀಘ್ರದಲ್ಲೇ ಸಿಹಿಸುದ್ದಿ ನೀಡುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ರ ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕೊರೊನಾಗೆ ಲಸಿಕೆ ಸಂಶೋಧಿಸುವಲ್ಲಿ ಅಮೆರಿಕಾದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ಕೇಳಿದ್ದೇನೆ. ಭಾರತದ ವಿಜ್ಞಾನಿಗಳು ಹಾಗೂ ಅನೇಕ ಸಂಸ್ಥೆಗಳೂ ಸಹ ಲಸಿಕೆ ಸಿದ್ಧಪಡಿಸಲು ಕಾರ್ಯ ನಿರ್ವಹಿಸುತ್ತಿದ್ದು, ಲಸಿಕೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಭಾರತ ಮಾತ್ರವಲ್ಲ ಇಡೀ ಜಗತ್ತೇ ಬಿಕ್ಕಟ್ಟಿಗೆ ಸಿಲುಕಿದೆ. ಪ್ರಪಂಚದ ಅನೇಕ ರಾಷ್ಟ್ರಗಳೀಗ ಚೀನಾದಲ್ಲಿ ಹೂಡಿಕೆ ಮಾಡಲು ಹಿಂದೆ ಸರಿಯುತ್ತಿದ್ದು, ಭಾರತವು ವಿಶ್ವದ ಎಲ್ಲ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಲಿದೆ ಎಂದು ಇದೇ ವೇಳೆ ಗಡ್ಕರಿ ತಿಳಿಸಿದರು.