ನವದೆಹಲಿ: ಎಸ್ಸಿ/ಎಸ್ಟಿಯ ಬಡ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ಸರ್ಕಾರ ನೀಡುತ್ತಿರುವ ಅನುದಾನದ ಬಹು ಕೋಟಿ ಮೊತ್ತ ಖಾಸಗಿ ಸಂಸ್ಥೆಗಳ, ಬ್ಯಾಂಕ್ ಹಾಗೂ ಸರ್ಕಾರಿ ಅಧಿಕಾರಿಗಳ ಪಾಲಾಗುತ್ತಿದೆ ಎಂದು ಕೇಂದ್ರೀಯ ತನಿಖಾ ತಂಡ ತನ್ನ ತನಿಖೆಯಲ್ಲಿ ತಿಳಿಸಿದೆ.
ಬಹುತೇಕ ವಿದ್ಯಾರ್ಥಿ ವೇತನ ವಂಚನೆಗೆ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಮಕ್ಕಳೇ ಗುರಿಯಾಗುತ್ತಿದ್ದಾರೆ. ಈ ಕುಟುಂಬಗಳು ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲೇ ವಂಚನೆಯ ಜಾಲ ವ್ಯಾಪಕವಾಗಿ ಪಸರಿಸಿದೆ ಎಂದು ಸಿಬಿಐ ಹೇಳಿದೆ.
ಸಿಬಿಐ ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ₹ 250 ಕೋಟಿ ವಿದ್ಯಾರ್ಥಿ ವೇತನ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿ ಹಾಗೂ ರಾಜ್ಯ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಇದರ ಬಾಹುಗಳು ಉತ್ತರಖಂಡ್, ಉತ್ತರ ಪ್ರದೇಶ ಸೇರಿದಂತೆ ದೇಶದ ಇತರೆ ಭಾಗಗಳಿಗೆ ವ್ಯಾಪಿಸಿದೆ ಎಂದಿದೆ.
ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಕಾಲರ್ಶಿಫ್ ಹಗರಣಗಳು ಕಂಡುಬಂದಲ್ಲಿ ಯಾವುದೇ ರಾಜ್ಯಗಳು ಏಜೆನ್ಸಿಗೆ ಮಾಹಿತಿ ನೀಡಿದ ಪ್ರಕರಣ ಒಪ್ಪಿಸಿದರೆ ಅವುಗಳ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಸಿಬಿಐನ ಉನ್ನತ ಅಧಿಕಾರಿಗಳ ಮೂಲ ತಿಳಿಸಿವೆ.
ವಿದ್ಯಾರ್ಥಿ ವೇತನ ವಂಚನೆ ಹಗರಣವು ಲವ್ಲಿ ಪ್ರೊಫೆಷನಲ್ ವಿವಿ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯವು ವಿವಿಧ ರಾಜ್ಯಗಳಲ್ಲಿ ಆರಂಭಿಸಿರುವ ಕೇಂದ್ರಗಳು ಹಾಗೂ ಹಿಮಾಚಲ ಪ್ರದೇಶದಲ್ಲಿ ಕೂಡ ಹಬ್ಬಿದೆ. ಎಸ್ಸಿ/ಎಸ್ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಂದ ದಾಖಲೆಗಳನ್ನು ಸಂಗ್ರಹಿಸಿ ಬಳಿಕ ಪ್ರವೇಶ ನೀಡಿರುವುದಿಲ್ಲ. ಅದೇ ದಾಖಲೆಗಳ ಇರಿಸಿಕೊಂಡು ಶಿಕ್ಷಣ ಇಲಾಖೆ ಮತ್ತು ಬ್ಯಾಂಕ್ ಅಧಿಕಾರಿಗಳ ಸಹಕಾರದಿಂದ ನಕಲಿ ಖಾತೆ ತೆರೆದು ವಿದ್ಯಾರ್ಥಿ ವೇತನ ಲಪಟಾಯಿಸುತ್ತಾರೆ ಎಂದು ಸಿಬಿಐ ತನಿಖೆಯಲ್ಲಿ ಕಂಡುಕೊಂಡಿದೆ.