ನವದೆಹಲಿ: ಕೊರೊನಾ ವೈರಸ್ನಿಂದ ಉಂಟಾದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಸುಪ್ರೀಂಕೋರ್ಟ್ ಮುಂದಾಗಿದ್ದು, ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದೆ.
ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್ ಸಹಭಾಗಿತ್ವದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಇಂದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಾಗಾರ ನಡೆಯಲಿದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ವೃದ್ಧಿಗೆ ಈ ಕಾರ್ಯಾಗಾರ ಸಹಾಯವಾಗಲಿದ್ದು ಸುಪ್ರೀಂ ಕೋರ್ಟ್ನ ಅಧಿಕಾರಿಗಳು, ರಿಜಸ್ಟ್ರಿ ಸಿಬ್ಬಂದಿ, ವಕೀಲರು ಮುಂತಾದವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಶರದ್ ಅರವಿಂದ್ ಬೊಬ್ಡೆ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್ ಆರ್.ಭಾನುಮತಿ ಎಲ್ಲರೂ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಕೊರೊನಾದಿಂದಾಗಿ ಉಂಟಾದ ಖಿನ್ನತೆಯನ್ನು ದೂರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದರು.
ಕಾರ್ಯಾಗಾರದ ಮೊದಲ ಭಾಗವಾಗಿ ಮೈಂಡ್ ಮ್ಯಾಟರ್ಸ್ ಎಂಬ ಸಂವಾದ ಕಾರ್ಯಾಗಾರವನ್ನು ಹೆಚ್ಚುವರಿ ಕಟ್ಟಡ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಕೊರೊನಾದಿಂದ ದೀರ್ಘ ಕಾಲದ ಮಾನಸಿಕ ಅಸ್ವಸ್ಥತೆ ಹಾಗೂ ಒತ್ತಡಗಳು ಕಂಡು ಬಂದ ಕಾರಣದಿಂದ ಸಿಬ್ಬಂದಿಯನ್ನು ಆರೋಗ್ಯವಾಗಿರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.