ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಪಕ್ಷದ ಅನರ್ಹ ಶಾಸಕರ ಪ್ರಕರಣದ ಕುರಿತಾದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದ್ದು, ಎರಡು ಕಡೆಯ ವಕೀಲರಿಂದ ವಾದ ಪ್ರತಿವಾದ ಆಲಿಸಿರುವ ನ್ಯಾಯಾಲಯ ಬುಧವಾರ(ನವೆಂಬರ್ 13) ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸಲಿದೆ.
ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಶಾಸಕತ್ವದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಈಗಾಗಲೇ ನಡೆದಿದ್ದು ಮಹತ್ವದ ತೀರ್ಪು ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಉಪಚುನಾವಣೆ ಮುಂದೂಡಬೇಕೆಂದು ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದರಿಂದ ಅನರ್ಹ ಶಾಸಕರು ಆತಂಕಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕೋರ್ಟ್ ತೀರ್ಪು ಪ್ರಕಟಿಸುವವರೆಗೂ ಅನರ್ಹರ ಸ್ಥಿತಿ ಅತಂತ್ರವಾಗಿಯೇ ಇರಲಿದೆ. ಒಂದು ವೇಳೆ ನ್ಯಾಯಾಲಯ ಸ್ಪೀಕರ್ ಆದೇಶವನ್ನು ರದ್ದುಗೊಳಿಸಿದರೆ ಶಾಸಕರು ಅನರ್ಹತೆಯಿಂದ ಪಾರಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು.