ಹೊಸದಿಲ್ಲಿ: ನೌಕಾಪಡೆಯಲ್ಲಿ ಮಹಿಳಾ ಯೋಧರು ಪುರುಷ ಯೋಧರಷ್ಟೇ ಸಮರ್ಥವಾಗಿ ಕೆಲಸ ಮಾಡಬಲ್ಲರು ಎಂದು ಅಭಿಪ್ರಾಯ ಪಟ್ಟಿರುವ ದೇಶದ ಸರ್ವೋಚ್ಛ ನ್ಯಾಯಾಲಯ, ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳ ಶಾಶ್ವತ ಮುಂದುವರಿಕೆಗೆ ಹಸಿರು ನಿಶಾನೆ ನೀಡಿದೆ.
2008 ರ ಮುಂಚೆ ನೌಕಾಪಡೆ ಸೇರ್ಪಡೆಯಾದ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ನೇಮಕಾತಿ ನಿರಾಕರಿಸುವ ಸರ್ಕಾರದ ನಿಯಮಾವಳಿಯನ್ನು ಈ ಮೂಲಕ ಅಪೆಕ್ಸ್ ಕೋರ್ಟ್ ರದ್ದುಗೊಳಿಸಿದೆ. ಮೂರು ತಿಂಗಳೊಳಗೆ ನೌಕಾಪಡೆಯಲ್ಲಿ ಶಾಶ್ವತ ಮಹಿಳಾ ಆಯೋಗ ರಚಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ದೇಶಕ್ಕಾಗಿ ಸೇವೆ ಸಲ್ಲಿಸಿದ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಸ್ಥಾನಮಾನ ನಿರಾಕರಿಸುವುದು ಎಂದರೆ ಅನ್ಯಾಯ ಮಾಡಿದಂತೆ. ಅಲ್ಲದೆ ಇದು ಲಿಂಗ ತಾರತಮ್ಯವೂ ಹೌದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗ ಈ ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಮಹಿಳಾ ಹಾಗೂ ಪುರುಷ ಅಧಿಕಾರಿಗಳಿಬ್ಬರಿಗೂ ಸಮಾನ ಸ್ಥಾನಮಾನ ನೀಡಬೇಕೆಂದು ಮಹತ್ವದ ಆದೇಶ ನೀಡಿದೆ.