ನವದೆಹಲಿ: ತಬ್ಲಿಘಿ ಜಮಾತ್ ಸಮಾವೇಶದ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಆದೇಶ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಕೆಲ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಬ್ಲಿಘಿ ಜಮಾತ್ ಸಮಾವೇಶ ಕುರಿತು ಸುಳ್ಳು ಸುದ್ದಿ ಹಾಗೂ ಕೋಮು ಪ್ರಚೋದನಕಾರಿ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ, ಇಂಥ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಜಮಿಯತ್ ಉಲೇಮಾ-ಎ-ಹಿಂದ್ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡಲಾಗದು. ಮುಂದಿನ ವಾರ ಈ ಕುರಿತು ವಿಸ್ತೃತ ವಿಚಾರಣೆ ನಡೆಸಲಾಗುವುದು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರಸಾರ ತಡೆಗೆ ದೂರಗಾಮಿ ಪರಿಣಾಮ ಬೀರುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.
"ದೆಹಲಿಯ ಮರ್ಕಜ್ನಲ್ಲಿ ಭಾಗವಹಿಸಿದ್ದ ಹಾಗೂ ಕೋವಿಡ್-19 ಸೋಂಕಿತರಾದವರ ಹೆಸರನ್ನು ಕೆಲ ಮಾಧ್ಯಮಗಳು ಪ್ರಕಟಿಸುತ್ತಿವೆ. ಇದು ಕಾನೂನಿಗೆ ವಿರುದ್ಧವಾಗಿದೆ." ಎಂದು ಜಮಿಯತ್ ವಕೀಲರು ವಾದಿಸಿದರು.
ವರದಿಗಾರಿಕೆಯಿಂದ ಕೊಲ್ಲುವಿಕೆ ಅಥವಾ ಮಾನಹಾನಿಯಾಗುತ್ತಿದ್ದರೆ ಅದಕ್ಕೆ ಉತ್ತರ ಬೇರೆಡೆ ಇದೆ. ಆದರೆ ವರದಿಗಾರಿಕೆಯ ಬಗ್ಗೆ ನೀವು ಪ್ರಶ್ನಿಸುತ್ತಿದ್ದರೆ ಭಾರತೀಯ ಪ್ರೆಸ್ ಕೌನ್ಸಿಲ್ ಅನ್ನು ಈ ಪ್ರಕರಣದಲ್ಲಿ ನೀವು ಸೇರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬೊಬ್ಡೆ ತಿಳಿಸಿದರು.