ನವದೆಹಲಿ: ಶಾಲೆಗಳಲ್ಲಿ ಒಂದರಿಂದ ಆರನೇ ತರಗತಿಯವರೆಗೆ ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವಂತೆ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಇಂದು ನೋಟಿಸ್ ನೀಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾ.ಮಲ್ಹೋತ್ರಾ ಮತ್ತು ನ್ಯಾ.ಕೆ.ಎಂ ಜೋಸೆಫ್ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ, ಈ ಬಗ್ಗೆ ಪ್ರತಿಕ್ರಿಯೆ ದಾಖಲಿಸುವಂತೆ ಶ್ರೀನಿವಾಸ್ ಗುಂಟಿಪಲ್ಲಿ ಅವರಿಗೆ ನೋಟಿಸ್ ನೀಡಿದೆ. ತೆಲುಗು ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಅನುಷ್ಠಾನಗೊಳಿಸುವುದನ್ನು ಪ್ರಶ್ನಿಸಿ ಶ್ರೀನಿವಾಸ್ ಗುಂಟಿಪಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಯೋಜನೆಗೆ ತಡೆಯಾಜ್ಞೆ ತಂದಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಮಾಧ್ಯಮವನ್ನು ತೆಲುಗಿನಿಂದ ಇಂಗ್ಲಿಷ್‌ಗೆ ಪರಿವರ್ತಿಸುವ ಆದೇಶವನ್ನು ಹೈಕೋರ್ಟ್ ತಡೆಹಿಡಿದಿತ್ತು.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸುಪ್ರೀಂ ನಡೆಸಿದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಕೆ.ವಿ ವಿಶ್ವನಾಥನ್ ಅವರು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡಿದ್ದರು. ಬಹುಪಾಲು ಪೋಷಕರು ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಬೇಕೆಂದು ಬಯಸಿದ್ದರು. ಇದು ಸಂವಿಧಾನದ ಪ್ರಕಾರ ಪ್ರಗತಿಪರ ಮತ್ತು ಭವಿಷ್ಯದಲ್ಲಿ ಉತ್ತಮ ಬೆಳವಣಿಗೆಗೆ ಸಹಾಯಕ ಎಂದು ಅವರು ಹೇಳಿದರು.
ಅರ್ಜಿದಾರರ ಪರ ವಕೀಲ ಗೋಪಾಲ್ ಶಂಕರ್ ನಾರಾಯಣನ್ ಅವರು ಸುಪ್ರೀಂನಿಂದ ನೋಟಿಸ್ ಸ್ವೀಕರಿಸಿದ್ದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್ 25ರಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ.