ನವದೆಹಲಿ: ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಲು ಕೇಂದ್ರ ಸರ್ಕಾರ ಯಾವುದೇ ರೀತಿಯ ಹಣ ಪಡೆದುಕೊಳ್ಳಬಾರದು ಎಂದು ಕೋರಿ ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಂಡಿದೆ.
ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ತೆರಳಲು ರೈಲು ಟಿಕೆಟ್ ಪಡೆದುಕೊಳ್ಳಲು ಹಣ ವಸೂಲಿ ಮಾಡಬಾರದು. ಅವರು ತವರು ನಾಡಿಗೆ ತೆರಳಲು ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನೂ ಕೇಂದ್ರ ಸರ್ಕಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಜಗದೀಪ್ ಚಾಕ್ಕೂರ್ ಎಂಬುವವರು ಅರ್ಜಿ ಸಲ್ಲಿಸಿದ್ದು, ಇದರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.
ದೇಶದ ವಿವಿಧ ಸ್ಥಳಗಳಲ್ಲಿರುವ ವಲಸೆ ಕಾರ್ಮಿಕರ ಬಳಿ 100 ರೂಗಿಂತಲೂ ಕಡಿಮೆ ಹಣವಿದೆ. ಆದರೆ ವಿವಿಧ ಪ್ರದೇಶಗಳಿಗೆ ತೆರಳಲು ರೂ 700ರಿಂದ ರೂ 800ರವರೆಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಕಾರ್ಮಿಕರು ಮನೆ ಸೇರಿಕೊಳ್ಳಲು ಟಿಕೆಟ್ ದರದಲ್ಲಿ ಶೆ.85ರಷ್ಟು ಸಬ್ಸಿಡಿ ನೀಡಬೇಕು ಎಂದಿದ್ದರು. ಇದೇ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ನಿನ್ನೆ ಇದೇ ವಿಷಯವಾಗಿ ಮಾತನಾಡಿದ್ದ ಸೋನಿಯಾ ಗಾಂಧಿ ವಲಸೆ ಕಾರ್ಮಿಕರು ಮನೆಗೆ ತೆರಳಲು ರೈಲ್ವೆ ಟಿಕೆಟ್ ಪಡೆದುಕೊಳ್ಳುತ್ತಿದ್ದು, ಈ ವೇಳೆ ಹೆಚ್ಚು ಹಣ ಅವರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.