ನವದೆಹಲಿ: ರಫೇಲ್ ಡೀಲ್‌ಗೆ ಸಂಬಂಧಪಟ್ಟ ಮಾಹಿತಿ ಪ್ರಕಟಣೆ ವಿವಾದ ಸಂಬಂಧಿಸಿದಂತೆ ದೇಶದ ಪರಮೋಚ್ಚ ನ್ಯಾಯಾಲಯ ಮಾಧ್ಯಮ ಸ್ವಾತಂತ್ರ್ಯದ ಪರ ಬ್ಯಾಟ್ ಬೀಸಿದೆ. ಮಾಧ್ಯಮಗಳು ರಫೇಲ್ ಡೀಲ್ ಕುರಿತ ಗೌಪ್ಯ ಮಾಹಿತಿ ಪ್ರಕಟಿಸದಂತೆ ತಡೆಯುವ ಯಾವುದೇ ಕಾನೂನು ಕೇಂದ್ರ ಸರ್ಕಾರಕ್ಕೆ ಅಧಿಕಾರ ಕೊಟ್ಟಿರುವುದಿಲ್ಲ ಅಂತ ಚಾಟಿ ಬೀಸಿದೆ.
ರಫೇಲ್ ಡೀಲ್‌ಗೆ ಸಂಬಂಧಪಟ್ಟ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಸಾಂವಿಧಾನದತ್ತವಾದ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು.
ಪ್ರಕರಣದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ರಫೇಲ್ ಡೀಲ್‌ಗೆ ಸಂಬಂಧಿಸಿದ ಸುದ್ದಿಗಳನ್ನು ಅಕ್ರಮವಾಗಿ ಪಡೆದು ಪ್ರಕಟಿಸಲಾಗಿದೆ. ಹಾಗಾಗಿ, ಈ ವರದಿಗಳನ್ನು ವಿಚಾರಣೆ ವೇಳೆ ನ್ಯಾಯಾಲಯ ದಾಖಲೆಯಾಗಿ ಪರಿಗಣಿಸಬಾರದು ಎಂದು ವಾದಿಸಿದರು. ಆದರೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ವಾದಕ್ಕೆ ಸೊಪ್ಪು ಹಾಕಲಿಲ್ಲ. ರಫೇಲ್ ಡೀಲ್‌ಗೆ ಸಂಬಂಧಿಸಿದ ಗೌಪ್ಯ ವರದಿಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಆಂಗ್ಲ ರಾಷ್ಟ್ರೀಯ ಪತ್ರಿಕೆ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಇಂಥ ಮಾಧ್ಯಮ ಪ್ರಕಟಣೆಗಳು ಸಾಂವಿಧಾನಾತ್ಮಕ ವಾಕ್ ಸ್ವಾತಂತ್ರ್ಯಕ್ಕೆ ಅನುಗುಣವಾಗಿವೆ ಅಂತ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಮಾಧ್ಯಮಗಳಿಗೂ ಕಿವಿಹಿಂಡಿದ ಕೋರ್ಟ್, ಕೆಲ ಮಾಧ್ಯಮಗಳ ಪಕ್ಷಪಾತೀಯ ಧೋರಣೆಯ ವಿರುದ್ಧ ಎಚ್ಚರಿಸಿತು. ಸತ್ಯ ಸಂಗತಿಗಳನ್ನು ಎತ್ತಿಹಿಡಿಯುವುದು ಸಾರ್ವಜನಿಕ ಕರ್ತವ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ನೆನಪಿಸಿತು.