ದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ವಕೀಲ ವಿನೀತ್ ಧಂಡಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ, ಬಾಂಬೆ ಹೈಕೋರ್ಟ್ಗೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ.
ನೀವು ಯಾಕೆ ಬಾಂಬೆ ಹೈಕೋರ್ಟ್ಗೆ ಹೋಗಬಾರದು? ಅವರಿಗೆ ಪ್ರಕರಣದ ಎಲ್ಲಾ ವಿಚಾರ ತಿಳಿದಿದ್ದು, ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲಿ ನಿಮಗೇನಾದರೂ ತೊಂದರೆಯಾಗಿದ್ದಲ್ಲಿ, ನೀವು ಇಲ್ಲಿಗೆ (ಸುಪ್ರೀಂ) ಬರಬಹುದು ಎಂದು ಅರ್ಜಿದಾರರಿಗೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ತಿಳಿಸಿದೆ.
ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಿಂಗ್ ಸಾವುಗಳು ಅನುಮಾನಾಸ್ಪದ ರೀತಿಯಲ್ಲಿ ಸಂಭವಿಸಿದ್ದು, ಪರಸ್ಪರ ಸಂಬಂಧ ಹೊಂದಿವೆ. ಹಾಗಾಗಿ ಸಿಬಿಐ ತನಿಖೆಗೆ ವಹಿಸಬೇಕೆಂದು ಅರ್ಜಿದಾರರ ಪರ ವಕೀಲ ಪುನೀತ್ ಧಂಡಾ ಹೇಳಿದರು.
ಈ ಕುರಿತು ಗರಂ ಆದ ನ್ಯಾಯಪೀಠ, ಪ್ರಕರಣ ಯಾವುದೇ ಇರಲಿ, ನೀವು ಬಾಂಬೆ ಹೈಕೋರ್ಟ್ಗೆ ಯಾಕೆ ಹೋಗ್ತಿಲ್ಲ? ನ್ಯಾಯಾಲಯದಲ್ಲಿ ಏನಾದರೂ ಸಮಸ್ಯೆ ಇದೆಯೇ? ಎಂದು ಪ್ರಶ್ನಿಸಿತು. ಮೊದಲು ನೀವು ಹೈಕೋರ್ಟ್ಗೆ ಹೋಗಿ, ಎಂದು ಹೇಳಿ ಅರ್ಜಿ ಹಿಂಪಡೆಯಲು ಅವಕಾಶ ನೀಡಿತು.