ನವದೆಹಲಿ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಫ್ಲಾಸ್ಮಾ ಥೆರಸಿ ಚಿಕಿತ್ಸೆ ನೀಡಿದ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಹಾಗಾಗಿ ಸೋಮವಾರ ಅವರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಜೂನ್. 19 ರಂದು ಮ್ಯಾಕ್ಸ್ ಆಸ್ಪತ್ರೆಯ ಐಸಿಯು ವಾರ್ಡ್‌ಗೆ ಜೈನ್ ದಾಖಲಾಗಿದ್ದರು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇನ್ಮುಂದೆ ಅವರು ಯಾವುದೇ ಆಮ್ಲಜನಕದ ಬೆಂಬಲವಿಲ್ಲದೆ ಉಸಿರಾಡಲಿದ್ದಾರೆ ಹಾಗೂ ಸಚಿವರ ಜ್ವರ ಕಡಿಮೆಯಾಗಿದ್ದು, ವೈದ್ಯರು ಈಗ ಅವರನ್ನು ಸಾಮಾನ್ಯ ವಾರ್ಡ್‌ನಲ್ಲಿಯೇ ಮೇಲ್ವಿಚಾರಣೆ ಮಾಡಲಿದ್ದಾರೆ.
ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಜೂನ್. 15 ರಂದು ಈಶಾನ್ಯ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಜೈನ್ ಅವರಿಗೆ, ಜೂನ್. 17 ರಂದು ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಜೂನ್. 19 ರಂದು ಜೈನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಅವರನ್ನು ಖಾಸಗಿ ಮ್ಯಾಕ್ಸ್ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಯಿತು. ಅದೇ ರಾತ್ರಿ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಯಿತು. ಅದರ ನಂತರ ಅವರ ಸ್ಥಿತಿ ಸುಧಾರಿಸಿದೆ ಎಂದು ವರದಿಯಾಗಿದೆ.