ಶಾಂತಿಕೇತನ (ಪಶ್ಚಿಮ ಬಂಗಾಳ) : ಪ್ರತಿವರ್ಷ ಹಬ್ಬದಂತೆಯೇ ಸಡಗರ, ಸಂಭ್ರಮದಿಂದಲೇ ಆಚರಿಸುತ್ತಿದ್ದ ರವೀಂದ್ರನಾಥ ಠಾಗೋರ್ ಅವರ ಜನ್ಮದಿನ ಈ ಬಾರಿ ಜನಸಂದಣಿ ಇಲ್ಲದೆ ಬಿಕೋ ಎನ್ನುತ್ತಿತ್ತು.
ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್ ಕಾರಣದಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿರ್ಭಮ್ ಜಿಲ್ಲೆಯ ಶಾಂತಿನಿಕೇತನದಲ್ಲಿರುವ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಕವಿ, ಕಾದಂಬರಿಕಾರ ರವೀಂದ್ರನಾಥ ಠಾಗೋರ್ ಅವರ 159ನೇ ಹುಟ್ಟುಹಬ್ಬವನ್ನು ಅಭಿಮಾನಿಗಳಿಲ್ಲದೆ ಆಚರಣೆ ಮಾಡಲಾಯಿತು. ಬಂಗಾಳ ಗ್ರಾಮೀಣ ಒಳನಾಡಿನ ಕೋಲ್ಕತ್ತಾದ (ಹಿಂದಿನ ಕಲ್ಕತ್ತಾ) ವಾಯವ್ಯ ದಿಕ್ಕಿನ 158 ಕಿ.ಮೀ ದೂರದಲ್ಲಿ ರವೀಂದ್ರನಾಥ ಠಾಗೋರ್ ಅವರು ಸ್ಥಾಪಿಸಿದ ಶಾಂತಿನಿಕೇತನ ಇದೆ. ಪ್ರತಿ ವರ್ಷದಂತೆ ಸಡಗರದಿಂದ ಜರುಗಬೇಕಾಗಿದ್ದ ಠಾಗೋರ್ ಅವರ ಜನ್ಮದಿನಾಚರಣೆ ಈ ಬಾರಿ ಜನಸಂದಣಿ ಮತ್ತು ಚಟುವಟಿಕೆಗಳ ಕೋಲಾಹಲದಿಂದ ದೂರ ಉಳಿದಿತ್ತು. ಈ ರೀತಿ ಆದದ್ದು 7 ದಶಕದಲ್ಲಿ ಇದೇ ಮೊದಲು.
ವಿಶ್ವವಿದ್ಯಾಲಯದ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರು, ಆಶ್ರಮ, ಪ್ರಾರ್ಥನಾ ಮಂದಿರ, ರವೀಂದ್ರ ಭವನ ಮತ್ತು ಚತ್ತಿಂಟಾಲಾ ಸದಸ್ಯರನ್ನು ಒಟ್ಟುಗೂಡಿಸಿ ಜನ್ಮದಿನ ಆಚರಿಸಿದರು. ನೊಬೆಲ್ ಪ್ರಶಸ್ತಿ ವಿಜೇತ ಠಾಗೋರ್ ಅವರ ಕೊಡುಗೆಗಳನ್ನು ಸ್ಮರಿಸಿದರು. ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ಬೆಳಗ್ಗೆ ಪ್ರಾರ್ಥನಾ ಗೀತೆ ಮತ್ತು ಸಾಂಸ್ಕೃತಿಕ ಮೆರವಣಿಗೆ ಮಾಡುತ್ತಿದ್ದರು. ನೂರಾರು ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ನಡೆಯುತ್ತಿತ್ತು. 1941ರಲ್ಲಿ ಠಾಗೋರ್ ತಮ್ಮ ಕೊನೆಯ ಜನ್ಮದಿನವನ್ನು ಆಚರಿಸಿದ ಶಾಂತಿನಿಕೇತನದಲ್ಲಿರುವ ಉದಯನ್ ಎಂಬ ಮನೆಯಲ್ಲಿ ವಿಶೇಷ ಪ್ರಾರ್ಥನೆ ಜರುಗುತ್ತಿತ್ತು.
1863ರಲ್ಲಿ ಸ್ಥಾಪನೆಯಾದ ಶಾಂತಿನಿಕೇತನ 1921ರಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯವಾಗಿ ಬೆಳೆದು ಪ್ರತಿ ವರ್ಷ ದೇಶದ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಶಾಂತಿನಿಕೇತನ ಒಂದು ಪ್ರವಾಸಿ ತಾಣವೂ ಆಗಿದೆ ಮತ್ತು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಶಾಂತಿನಿಕೇತನವನ್ನು ಹಿಂದೆ ಭುಬಾಂಡಂಗ (ಭುಬನ್ ಡಕಟ್ ಎಂಬ ಸ್ಥಳೀಯ ಡಕಾಯಿತನ ಹೆಸರು) ಎಂದು ಕರೆಯುತ್ತಿದ್ದರು.