ಅಮರಾವತಿ: ಆಂಧ್ರಪ್ರದೇಶದ ಪ್ರತೀ ಜಿಲ್ಲೆಯಲ್ಲಿರುವ 2 ಸಾವಿರ ನಿರುದ್ಯೋಗಿ ಎಸ್ಸಿ, ಎಸ್ಟಿ, ಒಬಿಸಿ ಯುವಕರನ್ನ ಆಯ್ಕೆ ಮಾಡಿ ಮರಳು ರವಾನೆ ಕಾಂಟ್ರಾಕ್ಟ್ ನೀಡುವಂತೆ ಮುಖ್ಯಮಂತ್ರಿ ಜಗನ್ ಮೋಹನ್ ಆದೇಶಿಸಿದ್ದಾರೆ.
ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಎಸ್ಪಿಗಳೊಂದಿಗೆ ಸಭೆ ನಡೆಸಿದ ಸಿಎಂ ಜಗನ್ ಮೋಹನ್ ರೆಡ್ಡಿ, ಮರಳು ಕೊರತೆ ತಡೆಗಟ್ಟಲು ಆದೇಶ ಹೊರಡಿಸಲಾಗಿದ್ದು, ಆಯ್ಕೆಯಾದ ಯುವಕರಿಗೆ ವಾಹನಗಳ ಖರೀದಿಗೆ ಆಯಾ ಸಂಸ್ಥೆಗಳಿಂದ ಸಾಲ ಪಡೆಯುವಂತೆ ಸೂಚಿಸಲಾಗಿದೆ. ಈ ಕುರಿತು ತಕ್ಷಣದ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಎಂದು ಆದೇಶಿಸಿದ್ದಾರೆ.
ಜಗನ್ ಸರ್ಕಾರದ ನಿರ್ಧಾರಗಳೇನು:
- ಜಿಲ್ಲೆಗಳಲ್ಲಿ ಮರಳು ಸರಬರಾಜು ಮತ್ತು ಸಾಗಣೆ ಮೇಲ್ವಿಚಾರಣೆಯನ್ನು ಜೆಸಿ ಮಟ್ಟದ ಅಧಿಕಾರಿಗೆ ವಹಿಸಬೇಕು. ಅಧಿಕಾರಿ ಕೇವಲ ಆ ಜವಾಬ್ದಾರಿಗಳನ್ನು ಮಾತ್ರ ನಿರ್ವಹಿಸಬೇಕು.
- ಸರ್ಕಾರ ನಿಗದಿಪಡಿಸಿದ 4.90 ರೂಪಾಯಿ ದರದಲ್ಲಿ ಮರಳು ಸಾಗಣೆ ಮಾಡಲು ಮುಂದೆ ಬರುವವರು ತಮ್ಮ ವಾಹನಗಳನ್ನ ಬಳಸಬೇಕು.
- ರಾಜ್ಯದಲ್ಲಿನ ಎಲ್ಲ ಮರಳು ಸಂಗ್ರಹ ಸ್ಥಳಗಳು ಕಾರ್ಯ ನಿರ್ವಹಿಸಬೇಕು. ಪ್ರವಾಹ ಕಡಿಮೆಯಾಗಿ ಮರಳಿನ ಲಭ್ಯತೆ ಹೆಚ್ಚಾದಾಗ ಕಡಿಮೆ ದರದಲ್ಲಿ ಮರಳು ಒದಗಿಸಬೇಕು. ಮುಂದಿನ 60 ದಿನಗಳಲ್ಲಿ ಬದಲಾವಣೆ ಆಗಲೇ ಬೇಕು ಎಂದಿದ್ದಾರೆ.
- ಮರಳು ಅಕ್ರಮ ಸಾಗಣೆ ಮೇಲೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರಬೇಕು.
- ಮರಳು ಮಾಫಿಯಾದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಕೂಡದು. ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಈ ವಿಚಾರದಲ್ಲಿ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದ ವ್ಯತ್ಯಾಸ ಜನರಿಗೆ ಸ್ಪಷ್ಟವಾಗಿ ಗೊತ್ತಾಗಬೇಕು.