ಲಖನೌ (ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೆ ತಂದಿರುವ ಲವ್ ಜಿಹಾದ್ ವಿರುದ್ಧದ ನೂತನ 'ಮತಾಂತರ ನಿಷೇಧ 2020' ಕಾನೂನನ್ನು ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ವಿರೋಧಿಸುವುದಾಗಿ ಸಮಾಜವಾದಿ ಪಕ್ಷ (ಎಸ್‌ಪಿ)ಹೇಳಿದೆ.
ಕಾನೂನು ಬಾಹಿರ ಮತಾಂತರ ಅಥವಾ ಲವ್ ಜಿಹಾದ್ ವಿರುದ್ಧ ಉತ್ತರಪ್ರದೇಶ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಆನಂದಿಬೆನ್ ಪಟೇಲ್ ನಿನ್ನೆ ಅಂಕಿತ ಹಾಕಿದ್ದರು. ಇದರ ಬೆನ್ನಲ್ಲೇ ಇಂದು ಪ್ರಪಥಮ ಕೇಸ್ ಕೂಡ ದಾಖಲಾಗಿದೆ.
"ನಮ್ಮ ಪಕ್ಷವು ಅಂತಹ ಕಾನೂನಿನ ಪರವಾಗಿಲ್ಲ ಮತ್ತು ಅದನ್ನು ಬಲವಾಗಿ ವಿರೋಧಿಸುತ್ತದೆ. ಅಂತರ್ಜಾತಿ ಮತ್ತು ಅಂತರ್-ಧರ್ಮೀಯ ವಿವಾಹಗಳನ್ನು ಮಾಡಿಕೊಳ್ಳುವವರಿಗೆ ಸರ್ಕಾರ 50,000 ರೂ. ನೀಡುತ್ತದೆ.
ಹೀಗಿರುವಾಗ ಇಂತಹ ಕಾನೂನುಗಳನ್ನು ತರಲಾಗುತ್ತಿದೆ. ಇದರ ಬದಲು ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾನೂನನ್ನು ಜಾರಿಗೆ ತರಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.
ಯುಪಿ ಸರ್ಕಾರ ನವೆಂಬರ್ 24ರಂದು 'ವಿಧಿ ವಿರುಧ್ ಧರ್ಮಾಂತರನ್-2020' ಎಂಬ ಹೆಸರಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಲವ್ ಜಿಹಾದ್ ಎಂಬುದು ಕಾನೂನು ಬಾಹಿರ ಮತಾಂತರ ಎಂದು ಈ ಸುಗ್ರೀವಾಜ್ಞೆಯಲ್ಲಿ ಘೋಷಿಸಲಾಗಿತ್ತು.
ಈ ಹೊಸ ಕಾನೂನ ಅಡಿ ಕೇವಲ ವಿವಾಹಕ್ಕೋಸ್ಕರ ಬಲವಂತದ ಮತಾಂತರ ನಡೆಸಿದ ಆರೋಪಿಗಳಿಗೆ 15 ಸಾವಿರ ರೂ.ಗಳ ದಂಡದೊಂದಿಗೆ 1-5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎಸ್‌ಸಿ/ಎಸ್‌ಟಿ ಸಮುದಾಯದ ಅಪ್ರಾಪ್ತರು ಮತ್ತು ಮಹಿಳೆಯರ ಮತಾಂತರಕ್ಕೆ 25 ಸಾವಿರ ರೂ.ಗಳ ದಂಡದೊಂದಿಗೆ 3-10 ವರ್ಷಗಳ ಜೈಲು ಶಿಕ್ಷೆ ಇರುತ್ತದೆ.