ಚೆನ್ನೈ : ಖ್ಯಾತ ಹಿನ್ನೆಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸಾವಿನ ನಂತರ ಅವರ ಆಸ್ಪತ್ರೆ ಬಿಲ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವದಂತಿ ಬಗ್ಗೆ ಮಗ ಎಸ್‌ಪಿ ಚರಣ್ ಸ್ಪಷ್ಟನೆ ನೀಡಿದ್ದಾರೆ.
ಶ್ವಾಸಕೋಶ ಸಂಬಂಧಿ ಅನಾರೋಗ್ಯದಿಂದ ಸುಮಾರು ಎರಡು ತಿಂಗಳುಗಳ ಕಾಲ ಎಸ್ಪಿಬಿ ಚಿಕಿತ್ಸೆಯಲ್ಲಿದ್ದರು. ಅವರ ಸಾವಿನ ಬಳಿಕ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡತೊಡಗಿದ್ದವು. ಈ ಬಗ್ಗೆ ಸ್ವತಃ ವಿಡಿಯೋ ಮಾಡಿರುವ ಚರಣ್, ವದಂತಿಯನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಎಸ್ಪಿಬಿ ಅವರು ಆ. 5 ರಿಂದ ಕೊನೆ ದಿನದವರೆಗೂ ಎಂಜಿಎಂ ಆಸ್ಪತ್ರೆಯಲ್ಲೇ ಇದ್ದರು. ಆದರೆ, ಅವರ ಸಾವಿನ ಬಳಿಕ ಚಿಕಿತ್ಸಾ ವೆಚ್ಚದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏಕೆ ಇಂತಹ ವದಂತಿಗಳು ಹರಿದಾಡುತ್ತಿವೆ ಅನ್ನುವುದು ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಲ್ ಕಟ್ಟಲಾಗದೇ ತಮಿಳುನಾಡು ಸರ್ಕಾರ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಬಳಿ ನಾವು ಸಹಾಯ ಕೇಳಿದೆವು ಎಂಬ ಸುದ್ದಿ ಹರಡಿದೆ. ಆದರೆ, ಇದೆಲ್ಲ ಸುಳ್ಳು. ಇಂತಹ ಸಹಾಯವನ್ನು ನಾವು ಯಾರನ್ನೂ ಕೇಳಿಲ್ಲ. ಜನ ಏಕೆ ಓರ್ವ ವ್ಯಕ್ತಿ ಸತ್ತ ಬಳಿಕ ಇಲ್ಲ - ಸಲ್ಲದ ವದಂತಿಯನ್ನು ಹಬ್ಬಿಸುತ್ತಾರೋ ನನಗೆ ಗೊತ್ತಾಗುತ್ತಿಲ್ಲ.
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯ ಜೊತೆ ಒಂದು ಸುದ್ದಿಗೋಷ್ಠಿ ನಡೆಸಿ ಇನ್ನಷ್ಟು ವಿವರಣೆ ನೀಡುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೇ ಬಿಲ್ ಹಾಗೂ ಆಸ್ಪತ್ರೆ ಬಗ್ಗೆ ಮಾತನಾಡಿರುವ ಚರಣ್, ಆಸ್ಪತ್ರೆಯ ಸಿಬ್ಬಂದಿ ಎಸ್ಪಿಬಿ ಅವರನ್ನು ಚೆನ್ನಾಗಿಯೇ ನೋಡಿಕೊಂಡಿದೆ. ಅದಕ್ಕಾಗಿ ನಾನು ಅವರಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ಸುಳ್ಳು ಸುದ್ದಿ ಹಬ್ಬಿಸುವವರನ್ನೂ ನಾನು ಕ್ಷಮಿಸುತ್ತೇನೆ ಎಂದಿದ್ದಾರೆ.