ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಎಂಟು ತಿಂಗಳ ಆತನ ಗರ್ಭಿಣಿ ಹೆಂಡ್ತಿ ಹಾಗೂ ಆರು ವರ್ಷದ ಮಗುವನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ನಡೆದಿದೆ.
35 ವರ್ಷದ ಪ್ರಕಾಶ್ ಪಾಲ್, 28 ವರ್ಷದ ಹೆಂಡತಿ ಬ್ಯುಟಿ ಪಾಲ್ ಹಾಗೂ ಆರು ವರ್ಷದ ಮಗ ಅಂಗನ್ ಪಾಲ್ ಮೃತ ದುರ್ದೈವಿಗಳಾಗಿದ್ದಾರೆ. ಮೂವರ ಮೃತದೇಹಗಳು ಮನೆಯಲ್ಲಿ ಸಿಕ್ಕಿದ್ದು, ಇವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಾವ ಕಾರಣಕ್ಕಾಗಿ ಇವರ ಕೊಲೆ ಮಾಡಲಾಗಿದೆ ಎಂಬುದರ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.
ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರಕಾಶ್ ಕೆಲಸ ಮಾಡಿಕೊಂಡಿದ್ದರು. ಆರ್ಎಸ್ಎಸ್ನಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಮುರ್ಷಿದಾಬಾದ್ನ ಜಿಯಾಗಂಜ್ ಬಡಾವಣೆಯಲ್ಲಿರುವ ಮನೆಯೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.