ಹೈದರಾಬಾದ್ : ದೇಶಾದ್ಯಂತ ಸುಮಾರು 20,000 ಜನರಿಂದ 50 ಕೋಟಿ ರೂ.ಗೂ ಅಧಿಕ ಹಣವನ್ನು ಆನ್ಲೈನ್ ಮೂಲಕ ಪಡೆದು ಬಳಿಕ ಅವರನ್ನು ವಂಚಿಸಿರುವ ಮೂವರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆನ್ಲೈನ್ನಲ್ಲಿ ಆರೋಪಿಗಳು ನೀವು ನಮ್ಮ ಬಳಿ ಹೂಡಿಕೆ ಮಾಡಿದ್ರೆ, ಅದಕ್ಕೆ ನಾಲ್ಕು ಪಟ್ಟು ಹಣವನ್ನು ನಿಮಗೆ 90 ದಿನಗಳಲ್ಲಿ ನೀಡುತ್ತೇವೆ ಎಂದು ಹೇಳಿ ಹಣವನ್ನು ಪಡೆದಿದ್ದಾರೆ. ಆದ್ರೀಗ ಆರೋಪಿಗಳು ಹಣವನ್ನು ನೀಡದೇ ಮೋಸ ಮಾಡಿ ಪರಾರಿಯಾಗಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ತಿಳಿಸಿದ್ದಾರೆ.
ಓದಿ:ಅಪ್ರಾಪ್ತೆ ಮೇಲೆ ಅತ್ಯಾಚಾರ; ಯುವಕನ ವಿರುದ್ಧ ದೂರು
ಠೇವಣಿದಾರರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಹರಿಯಾಣ ಮತ್ತು ದೆಹಲಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಚೀನಾದ ಪ್ರಜೆಗಳಲ್ಲಿ ಓರ್ವ ಭಾರತವನ್ನು ತೊರೆದಿದ್ದು, ಇನ್ನೋರ್ವ ಭಾರತಕ್ಕೆ ಬಂದಿಲ್ಲ. ಇವರು ಆ್ಯಪ್ವೊಂದನ್ನು ಆರಂಭಿಸಿ, ಇದರ ಮೂಲಕ ಹಣವನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿನ್ನ ಅಡ್ಮಿನ್‌ಗಳಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೂಲಕ ದೇಶಾದ್ಯಂತ ಮೂರು ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಲು ಸೆಳೆಯುತ್ತಿದ್ದರು. ಯೋಜನೆಯ ಆಕರ್ಷಣೆಗೊಳಗಾಗುತ್ತಿದ್ದ ಜನರು ಹೂಡಿಕೆ ಮಾಡುತ್ತಿದ್ದು, ಫೋನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಂಡಿದ್ದರು.
ಒಮ್ಮೆ ಮಾಹಿತಿ ವಿನಿಮಯವಾದ ಕೂಡಲೇ ಆ್ಯಪ್ ಕಾರ್ಯ ಸ್ಥಗಿತಗೊಳ್ಳುತ್ತಿತ್ತು. ವಿವಿಧ ಚೀನಾ ವೆಬ್‌ಸೈಟ್‌ಗಳ ಮೂಲಕ ನೋಂದಣಿ ಮಾಡಲಾಗಿದ್ದ ವಂಚಕರ ಕಂಪನಿ ಖಾತೆಗೆ ಹಣ ಜಮೆ ಆಗುತ್ತಿತ್ತು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.