ನವದೆಹಲಿ: ತೆರಿಗೆ ವಂಚನೆ ಪ್ರಕರಣಗಳ ಸಂಬಂಧ ಕಾರ್ಯಾಚರಣೆ ಮುಂದುವರೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇರಳದ ಸ್ವಯಂ ಘೋಷಿತ ಕ್ರಿಶ್ಚಿಯನ್ ಧರ್ಮಗುರು (ಇವಾಂಜೆಲಿಸ್ಟ್) ಹಾಗೂ ಆತ ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ಮಾಡಿ ಒಟ್ಟು 14 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದೆ. ದಾಳಿಯಿಂದ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.
ಭಾರಿ ಅವ್ಯವಹಾರ ನಡೆಸುವ ಮೂಲಕ ತೆರಿಗೆ ವಿನಾಯಿತಿ ಪಡೆದ ಕೇರಳ ಮೂಲದ ಘೋಷಿತ ಧಾರ್ಮಿಕ ಶಿಕ್ಷಣ ಸಂಸ್ಥೆಯ ಸಂಸ್ಥೆ ಇದಾಗಿದ್ದು ವಿದೇಶ ಹಾಗೂ ದೇಶದ ನಾನಾ ಭಾಗಗಳಿಂದ ಬಡ ಮತ್ತು ಸಾರ್ವಜನಿಕರಿಂದ ದೇಣಿಗೆಗಳನ್ನು ಸಂಗ್ರಹಿಸಿದೆ. ಆ ಹಣವನ್ನು ರಿಯಲ್ ಎಸ್ಟೇಟ್ ಮತ್ತು ವೈಯಕ್ತಿಕ ಲಾಭದಾಯಕ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದೆ ಎಂದು ತಿಳಿದು ಬಂದಿದೆ.
ವಿವಿಧೆಡೆ ಇಂದು ದಾಳಿ ಮಾಡಿದ ತೆರಿಗೆ ಅಧಿಕಾರಿಗಳು 8 ಕೋಟಿ ರೂ. ವಶಪಡಿಸಿಕೊಂಡರೆ ಇದಕ್ಕೂ ಮುನ್ನ 6 ಕೋಟಿ ರೂ. ಹಣವನ್ನು ವಶಕ್ಕೆ ತೆಗೆದುಕೊಂಡಿದ್ದರು. ಒಟ್ಟು 14 ಕೋಟಿ ರೂ. ಹಣವನ್ನು ತೆರಿಗೆ ವಂಚಕರಿಂದ ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ ಈ ಸ್ವಯಂ ಘೋಷಿತ ಧಾರ್ಮಿಕ ಶಿಕ್ಷಣ ಸಂಸ್ಥೆಯು ಕೇರಳಾದ ತಿರುವಲ್ಲಾ ಮೂಲದ ಬಿಲೀವರ್ಸ್ ಚರ್ಚ್ ಗುಂಪಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದ್ದು ದಾಳಿ ವೇಳೆ ನಿಷೇಧಿತ 1000 ಮತ್ತು 500 ರೂ. ಮುಖಬೆಲೆಯ ಹಳೆ ನೋಟುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆ ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ, ಚಂಡೀಗಢ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನ. 5 ರಂದು ದಾಳಿ ಮಾಡಲಾಗಿದೆ. ಹಲವು ರೀತಿಯಿಂದ ತೆರಿಗೆ ವಿನಾಯಿತಿ ಪಡೆಯುವ ಮೂಲಕ ವೈಯಕ್ತಿಕ ಲಾಭದ ಉದ್ದೇಶವಿಟ್ಟುಕೊಂಡು ಅಕ್ರಮ ವ್ಯವಹಾರಗಳನ್ನು ಮಾಡುತ್ತಿದ್ದ ಧಾರ್ಮಿಕ ಶಿಕ್ಷಣ ಸಂಸ್ಥೆಯು ದೇಶಾದ್ಯಂತ ಹಲವು ಶಾಲಾ-ಕಾಲೇಜು, ವೈದ್ಯಕೀಯ ಕಾಲೇಜು, ಆಸ್ಪತ್ರೆಯನ್ನು ನಡೆಸುತ್ತಿದೆ. ವಿದೇಶಗಳಿಂದ ದೇಣಿಗೆ ಸಹ ಸಂಗ್ರಹಿಸಿದೆ ಎನ್ನಲಾಗುತ್ತಿದೆ.