ರಾಂಚಿ: ಇಷ್ಟು ದಿನ ಏಕದಿನ ಹಾಗೂ ಟಿ-20 ಕ್ರಿಕೆಟ್ನಲ್ಲಿ ಮಾತ್ರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸಿದ್ದಾರೆ.
ಈ ಹಿಂದೆ ಟೆಸ್ಟ್ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿರಲಿಲ್ಲ. ಆದರೆ ಈ ಸರಣಿಯಲ್ಲಿ ದ್ವಿಶತಕ ಸೇರಿದಂತೆ ಎರಡು ಶತಕ ಸಹ ಸಿಡಿಸಿ ಮಿಂಚಿದ್ದಾರೆ.
ಮೂರು ಟೆಸ್ಟ್ ಪಂದ್ಯಗಳಿಂದ ಶತಕ, ದ್ವಿಶತಕ ಸೇರಿದಂತೆ ಬರೋಬ್ಬರಿ 529ರನ್ಗಳಿಕೆ ಮಾಡಿರುವ ರೋಹಿತ್ ಶರ್ಮಾ ಅನೇಕ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಇದೀಗ ಹರಿಣಗಳ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ತಮ್ಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಸಿದ್ದಕ್ಕಾಗಿ ಇಬ್ಬರಿಗೆ ಧನ್ಯವಾದ ಹೇಳಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಗೆ ರೋಹಿತ್ ಶರ್ಮಾ ಧನ್ಯವಾದ ಹೇಳಿದ್ದು, ತಂಡದ ಮ್ಯಾನೇಜ್ಮೆಂಟ್ಗೂ ಆಭಾರಿಯಾಗಿರುವೆ ಎಂದು ಹೇಳಿದ್ದಾರೆ. ಈ ಮೂಲಕ ರೋಹಿತ್-ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಗಾಸಿಪ್ ಸುದ್ದಿ ಹರಿಡಿಸುತ್ತಿದ್ದವರಿಗೂ ಹಿಟ್ಮ್ಯಾನ್ ತಿರುಗೇಟು ನೀಡಿದ್ದಾರೆ.