ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯು ಅಹ್ಮದಾಬಾದ್-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ಗೆ ಸಂಬಂಧಿಸಿದಂತೆ ಕೆಲ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅಗತ್ಯವಿರುವ ವನ್ಯಜೀವಿ, ಅರಣ್ಯ ಮತ್ತು ಕರಾವಳಿ ನಿಯಂತ್ರಣ ವಲಯಗಳ ಅನುಮತಿ ಪಡೆದಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಸಿಇಒ ವಿ ಕೆ ಯಾದವ್ ತಿಳಿಸಿದ್ದಾರೆ.
ಬುಲೆಟ್ ರೈಲು ಯೋಜನೆಗೆ ಬೇಕಾದ ಶೇ.67ರಷ್ಟು ಭೂಮಿಯನ್ನು ರೈಲ್ವೆ ಇಲಾಖೆ ಪಡೆದಿದೆ. ಗುಜರಾತ್‌ನಲ್ಲಿ 825 ಹೆಕ್ಟೇರ್, ಮಹಾರಾಷ್ಟ್ರದಲ್ಲಿ 97 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನುಳಿದ 7 ಹೆಕ್ಟೇರ್ ಭೂಮಿಯನ್ನು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಸ್ವಾಧೀನ ಪಡಿಸಿಕೊಂಡಿದೆ ಎಂದು ಯಾದವ್ ಹೇಳಿದರು.
ಗುಜರಾತ್‌ನಲ್ಲಿ 32 ಸಾವಿರ ಕೋಟಿ ರೂ. ವೆಚ್ಚದಲ್ಲಿ 325 ಕಿಲೋಮೀಟರ್ ಉದ್ದದ ವಯಾಡಕ್ಟ್ ಮತ್ತು ಐದು ನಿಲ್ದಾಣಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ನ ಅಂದಿನ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರು ಸೆಪ್ಟೆಂಬರ್ 14, 2017ರಂದು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಅಡಿಪಾಯ ಹಾಕಿದ್ದರು. 2023ರ ವೇಳೆಗೆ ಯೋಜನೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಬುಲೆಟ್ ಟ್ರೈನ್ ಗಂಟೆಗೆ 350 ಕಿ.ಮೀ ವೇಗದಲ್ಲಿ, 508 ಕಿ.ಮೀ ಅನ್ನು ಎರಡು ಗಂಟೆಯೊಳಗೆ ಪೂರೈಸುವ ನಿರೀಕ್ಷೆಯಿದೆ. ರೈಲುಗಳು ಉಭಯ ನಗರಗಳ ಸಂಚಾರಕ್ಕೆ 7 ಗಂಟೆ ತೆಗೆದುಕೊಳ್ಳುತ್ತವೆ. ವಿಮಾನಗಳು 1 ಗಂಟೆ ತೆಗೆದುಕೊಳ್ಳುತ್ತವೆ ಎಂದು ಯಾದವ್ ತಿಳಿಸಿದರು.
ರೈಲುಗಳಲ್ಲಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ 81,459 ಕೋಟಿ ರೂ.ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯು 2022ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.