ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ವಿಧಿವಶರಾಗಿದ್ದಾರೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದ ಅವರು ಇಂದು ಬೆಳಗ್ಗೆ ಮುಂಬೈನ ಹೆಚ್.ಎನ್ ರಿಲಾಯನ್ಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿ ಸಮಸ್ಯೆಗಳು ಹಾಗೂ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.
1970ರಲ್ಲಿ ರಿಷಿ ಕಪೂರ್ ತಂದೆ ರಾಜ್ ಕಪೂರ್ ಅಭಿನಯದ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಮೊದಲ ಬಾರಿಗೆ ಬಾಲನಟನಾಗಿ ಕಾಣಿಸಿಕೊಂಡಿದ್ದ ಅವರಿಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿತ್ತು. 1973ರಲ್ಲಿ ಮೊದಲ ಬಾರಿಗೆ ಬಾಬಿ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರಿಗೆ 1974ರಲ್ಲಿ ಫಿಲ್ಮ್ ಫೇರ್ ಅವಾರ್ಡ್ ಅನ್ನೂ ತಂದುಕೊಟ್ಟಿತ್ತು. ಇದಾದ ನಂತರ ಸುಮಾರು 25 ವರ್ಷಗಳವರೆಗೆ ಯಾವುದೇ ಫಿಲ್ಮ್ ಫೇರ್ ಅವಾರ್ಡ್ ಅವರಿಗೆ ಸಿಕ್ಕಿರಲಿಲ್ಲ. ಸುಮಾರು 123ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರಿಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಗಳು ದೊರೆತಿವೆ.
ರಿಷಿ ಕಪೂರ್ ಜೀವನ ಹಿನ್ನೆಲೆ
ರಿಷಿ ಕಪೂರ್ ಬಾಂಬೆಯ ಚೆಂಬೂರ್ನಲ್ಲಿ ಪಂಜಾಬಿ ಮೂಲದ ಕುಟುಂಬದಲ್ಲಿ 1952 ಸೆಪ್ಟೆಂಬರ್ 4ರಂದು ಜನಿಸಿದರು. ಬಾಲಿವುಡ್ ಹಿರಿಯ ನಿರ್ದೇಶಕ, ನಟ ರಾಜ್ ಕಪೂರ್ ಹಾಗೂ ಪತ್ನಿ ಕೃಷ್ಣ ರಾಜ್ ಕಪೂರ್ ಅವರ ಎರಡನೇ ಪುತ್ರನಾಗಿದ್ದಾರೆ. ಮುಂಬೈನ ಕ್ಯಾಂಪಿಯನ್ ಸ್ಕೂಲ್ ಹಾಗೂ ಮೆಯೋ ಕಾಲೇಜುಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. 1980 ಜನವರಿ 22ರಂದು ಸಹ ನಟಿ ನೀತು ಸಿಂಗ್ರನ್ನು ವಿವಾಹವಾಗಿದ್ದ ಇವರ ರಣಬೀರ್ ಕಪೂರ್ ಹಾಗೂ ರಿದ್ದಿಮಾ ಕಪೂರ್. ರಣಬೀರ್ ಕಪೂರ್ ಬಾಲಿವುಡ್ನಲ್ಲಿ ಸಕ್ರಿಯವಾಗಿದ್ದರೆ, ರಿದ್ದಿಮಾ ಫ್ಯಾಷನ್ ಡಿಸೈನರ್ ಆಗಿ ಮುಂದುವರೆದಿದ್ದಾರೆ.
ರಿಷಿ ಕಪೂರ್ ಸಿನಿಮಾ ಜೀವನ
1955ರಲ್ಲಿ ಬಾಲನಟನಾಗಿ ಪರದೆಯ ಮೇಲೆ ಕಾಣಿಸಿಕೊಂಡರು. ರಾಜ್ ಕಪೂರ್ ಹಾಗೂ ನರ್ಗೀಸ್ ಅಭಿನಯದ ಶ್ರೀ 420 ಚಿತ್ರದಲ್ಲಿ ಪ್ಯಾರ್ ಹುವಾ, ಇಕಾರ್ ಹುವಾ ಹಾಡಿನಲ್ಲಿ ಮೂರು ವರ್ಷದ ಬಾಲಕನಾಗಿದ್ದಾಗಲೇ ಬಣ್ಣ ಹಚ್ಚಿದ್ದರು. ನಂತರ ಮೇರಾ ನಾಮ್ ಜೋಕರ್ನಲ್ಲಿ, ಅದಾದ ನಂತರ ಬಾಬಿಯಲ್ಲಿ ಮೊದಲು ಬಾರಿಗೆ ಲೀಡ್ ರೋಲ್ನಲ್ಲಿ ಮಿಂಚಿದ್ದರು.
1973ರಿಂದ 2000 92 ಸಿನಿಮಾಗಳಲ್ಲಿ ಕಾಣಿಸಿಕೊಂಡ ರಿಷಿಗೆ ನಿರೀಕ್ಷಿತ ಗೆಲುವು ದೊರೆತಿರಲಿಲ್ಲ. ದೊ ದೂನಿ ಚಾರ್, ಕಪೂರ್ ಮತ್ತು ಸನ್ಸ್' ಸಿನಿಮಾಗಳಿಗೆ ಫಿಲ್ಮ್‌ಫೇರ್ ಅವಾರ್ಡ್ ಪಡೆದಿದ್ದರು. ಬಾಲಿವುಡ್ ಮಾತ್ರವಲ್ಲದೇ ಡೋಂಟ್ ಸ್ಟಾಪ್ ಡ್ರೀಮಿಂಗ್ ಇಂಗ್ಲೀಷ್ ಚಿತ್ರದಲ್ಲಿ ರಿಷಿ ಕಪೂರ್ ನಟಿಸಿದ್ದಾರೆ. ಈ ಚಿತ್ರವನ್ನು ಆದಿತ್ಯರಾಜ್ ಕಪೂರ್ ನಿರ್ದೇಶನ ಮಾಡಿದ್ದರು.
ನಾಲ್ಕು ತಲೆಮಾರುಗಳದ್ದೂ ಬಾಲಿವುಡ್ನೊಂದಿಗೆ ನಂಟು.!
ರಿಷಿ ಕಪೂರ್ ಕುಟುಂಬದ ನಾಲ್ಕು ತಲೆಮಾರುಗಳು ಸಿನಿಮಾ ರಂಗದಲ್ಲಿ ಛಾಪು ಮೂಡಿಸುತ್ತಿವೆ. ತನ್ನ ತಾತ ಪೃಥ್ವಿರಾಜ್ ಕಪೂರ್ರಿಂದ ಆರಂಭವಾದ ಈ ಸಿನಿಮಾ ಗೀಳು ಈಗಲೂ ಮುಂದುವರೆದಿದೆ. ಈಗ ರಿಷಿ ಕಪೂರ್ ಮಗ ರಣಬೀರ್ ಕಪೂರ್ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ.
ಲೇಡಿಸ್ ಮ್ಯಾನ್ ಅಂತ ಕರೆಸಿಕೊಳ್ತಿದ್ದ ಚಿಂಟು ಇವರು..!
ರಿಷಿ ಕಪೂರ್ರನ್ನು ಲೇಡಿಸ್ ಮ್ಯಾನ್ ಎಂದೇ ಕರೆಯಲಾಗುತ್ತಿತ್ತು. ಅವರಿಗೆ ಮಹಿಳಾ ಅಭಿಮಾನಿಗಳ ಬಳಗ ದೊಡ್ಡದಿತ್ತು. ಎಲ್ಲಾ ನಟರಿಗೂ ಇದ್ದಂತೆ ರಿಷಿ ಕಪೂರ್ ಅನ್ನು ಅವರ ಕುಟುಂಬದವರು ಹಾಗೂ ಕೆಲವು ಅಭಿಮಾನಿಗಳು ಪ್ರೀತಿಯಿಂದ ಚಿಂಟು ಎಂದು ಕರೆಯುತ್ತಿದ್ದರು. ಜೊತೆಗೆ ಬಾಲಿವುಡ್ನಲ್ಲಿ ಪ್ರಿನ್ಸ್ ಆಫ್ ರೊಮ್ಯಾನ್ಸ್ ಅಂತಾನೇ ಪ್ರಸಿದ್ಧಿ ಪಡೆದುಕೊಂಡಿದ್ದರು.
ರಿಷಿ ಕಪೂರ್ ಜೀವನ ''ಖುಲ್ಲಂ ಖುಲ್ಲಾ''..!
ಬಾಲಿವುಡ್ನಲ್ಲಿರುವ ನಿರ್ಮಾಪಕರು ಹಾಗೂ ನಿರ್ದೇಶಕರು ತಾರತಮ್ಯ ಮಾಡುತ್ತಾರೆ ಎಂದು ರಿಷಿ ಕಪೂರ್ ಒಮ್ಮೆ ಅಭಿಪ್ರಾಯಪಟ್ಟಿದ್ದರು. ಬಹುತೇಕರು ಅಮಿತಾಬ್ ಬಚ್ಚನ್ ಪರವಾಗಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ಜ್ ಸಿನಿಮಾದ ನಂತರ ರಿಷಿ ಕಪೂರ್ಗೆ ಖಿನ್ನತೆ ಕಾಡಿತ್ತು.
ರಿಷಿ ಕಪೂರ್ರವರ ಜೀವನ ಚರಿತ್ರೆಯ ಪುಸ್ತಕ ಕೂಡಾ ಬಿಡುಗಡೆಯಾಗಿದ್ದು, ಅದರ ಹೆಸರು ಖುಲ್ಲಂ ಖುಲ್ಲಾ: ಅನ್ಸೆನ್ಸಾರ್ಡ್. ಮೀನಾ ಅಯ್ಯರ್ ಜೊತೆಗೂಡಿ 2017ರಲ್ಲಿ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಬಾಬಿ ಚಿತ್ರಕ್ಕೆ ಪ್ರಶಸ್ತಿಯನ್ನು ಪಡೆಯಲು 30 ಸಾವಿರ ರೂಪಾಯಿಯನ್ನು ನೀಡಿದ್ದೆ ಎಂದು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಿಷಿಗೆ ಇರಲಿಲ್ಲ ಆಸಕ್ತಿ..!
ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ರಿಷಿ ಕಪೂರ್ಗೆ ಆಸಕ್ತಿ ಇರಲಿಲ್ಲ. ಅನುಷ್ಕಾ ಶರ್ಮ ಹಾಗೂ ಅಭಿಷೇಕ್ ಬಚ್ಚನ್ ಮನವೊಲಿಸಿದ ಮೇಲೆ ಕೆಲಸ ಟ್ವಿಟರ್ನಲ್ಲಿ ತೊಡಗಿಸಿಕೊಂಡ ಅವರಿಗೆ ಅಪಾರ ಅಭಿಮಾನಿ ಬಳಗವಿತ್ತು. ಪ್ರಚಲಿತ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.
ತಂದೆ ಹಾಗೂ ಮಗನ ಮೊದಲ ಚಿತ್ರದ ಟವಲ್ ಸೀನ್ ..!
'102 ನಾಟ್ಔಟ್' ರಿಷಿ ಕಪೂರ್ ಹಾಗೂ ಅಮಿತಾಬ್ ಬಚ್ಚನ್ ಅವರು ಒಟ್ಟಿಗೆ ನಟಿಸಿರುವ ಕೊನೆಯ ಚಿತ್ರವಾಗಿದ್ದು, ತುಂಬಾ ವರ್ಷಗಳ ನಂತರ ಇಬ್ಬರೂ ಜೊತೆಯಲ್ಲಿ ನಟಿಸಿದ್ದರು.
ರಿಷಿ ಹಾಗೂ ತನ್ನ ಮಗ ರಣಬೀರ್ ಕಪೂರ್ ಇಬ್ಬರೂ ಕೂಡಾ ತಮ್ಮ ತಮ್ಮ ಮೊದಲ ಚಿತ್ರಗಳಲ್ಲಿ ಟವೆಲ್ ಬೀಳಿಸುವ ಸನ್ನೀವೇಶಗಳಲ್ಲಿ ನಟಿಸಿದ್ದಾರೆ. ರಿಷಿ ತಮ್ಮ ಬಾಬಿ ಸಿನಿಮಾದಲ್ಲಿ ಹಾಗೂ ರಣಬೀರ್ ಸಾವರಿಯಾ ಚಿತ್ರದಲ್ಲಿ ಈ ರೀತಿಯಾಗಿ ನಟಿಸಿದ್ದಾರೆ.
ಮೂಂಗೋಪಿಯಾಗಿದ್ದವರಿಗೆ ವಿವಾದಗಳು ಮೈಮೇಲೆ ಎಳೆದುಕೊಂಡಿದ್ದರು..!
ಮುಂಗೋಪಿಯಾಗಿದ್ದ ಅವರು ಇದೇ ಕಾರಣಕ್ಕಾಗಿ ಕೆಲವೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಸಾಲು ಸಾಲು ಚಿತ್ರಗಳು ನಿರೀಕ್ಷಿತ ಯಶಸ್ಸು ಕಾಣಿಸಿಕೊಳ್ಳದ ಕಾರಣದಿಂದ ಕೆಲವು ದಿನಗಳ ಕಾಲ ಮಾನಸಿಕ ಖಿನ್ನತೆಯೂ ಅವರನ್ನು ಆವರಿಸಿತ್ತು. ಈ ಮಾನಸಿಕ ಖಿನ್ನತೆಯಿಂದ ಹೊರಬರಲು ಅವರಿಗೆ ಸಾಕಷ್ಟು ಸಮಯ ಬೇಕಾಯಿತು. ಲಾಕ್ಡೌನ್ ವೇಳೆಯೂ ವೈನ್ ಶಾಪ್ ತೆರೆಯುವಂತೆ ಟ್ವೀಟ್ ಮಾಡಿದ್ದರು.
ಕ್ಯಾನ್ಸರ್ ಗೆದ್ದು ಬಂದಿದ್ದ ರಿಷಿ ಕಪೂರ್..!
ರಿಷಿ ಕಪೂರ್ಗೆ ಕ್ಯಾನ್ಸರ್ ಕಾಣಿಸಿಕೊಂಡಾಗ ಚಿಕಿತ್ಸೆಗಾಗಿ ನ್ಯೂಯಾರ್ಕ್ ತೆರಳಿದ್ದರು. 9 ತಿಂಗಳ ಬಳಿಕ ಕ್ಯಾನ್ಸರ್ನಿಂದ ಗುಣಮುಖರಾಗಿ ವಾಪಸ್ಸಾಗಿದ್ದರು. ಇದಾದ ಮೇಲೆಯೂ ಕೆಲವೊಂದು ವಯೋಸಹಜ ಅನಾರೋಗ್ಯವೂ ಕೂಡಾ ಕಾಣಿಸಿಕೊಂಡಿತ್ತು. ಈಗ ಕ್ಯಾನ್ಸರ್ ಸಂಬಂಧಿ ಸಮಸ್ಯೆಗಳ ಕಾರಣದಿಂದಾಗಿ ಮರಣ ಹೊಂದಿದ್ದಾರೆ.