ವಿಶ್ವದ ಅತೀ ಎತ್ತರದ ಶಿಖರ 'ಮೌಂಟ್ ಎವರೆಸ್ಟ್' ಹತ್ತಿಳಿಯಲು ಉತ್ತೇಜನ ತೋರಿಸುತ್ತಿರುವ ಪರ್ವತಾರೋಹಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದರ ಜೊತೆಗೆ ಕಸವೂ ಕೂಡ. ಹೌದು. ಪರ್ವತೋರೋಹಿಗಳು ಎಲ್ಲೆಂದರಲ್ಲಿ ಎಸೆಯುವ ಕಸವನ್ನು ಸ್ವಚ್ಚಗೊಳಿಸೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪರ್ವತಾರೋಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿರುವ ಹಿನ್ನೆಲೆಯಲ್ಲಿ ಕಸದ ರಾಶಿ ದಾಖಲೆ ಮಟ್ಟದಲ್ಲಿ ಶೇಖರಣೆಗೊಳ್ತಿದೆ ಎಂದು ದಾವಾ ಸ್ಟೀವನ್ ಎಂಬ ಶೆರ್ಪಾ ಹೇಳುತ್ತಾರೆ.
ಸುಮಾರು 8,000 ಮೀಟರ್ (ಸಮುದ್ರಮಟ್ಟದಿಂದ 26,240 ಅಡಿ) ಎತ್ತರದಲ್ಲಿನ ಕ್ಯಾಂಪ್‌ಸೈಟ್ 4 ನಲ್ಲಿ, ದಣಿದ ಆರೋಹಿಗಳು ಉಸಿರಾಡಲು ಕಷ್ಟಕರವಾಗಿರುವುದರಿಂದ, ಭಾರವಾದ ಟೆಂಟ್ಗಳನ್ನು ಒಯ್ಯದೇ ಅಲ್ಲೇ ಬಿಟ್ಟು ಹೋಗುತ್ತಾರೆ. ಆ ಪ್ರದೇಶದಲ್ಲಿ ಹೆಚ್ಚು ಗಾಳಿಯಿರುವ ಕಾರಣ ಟೆಂಟ್ಗಳು ಹಾಗೂ ತ್ಯಾಜ್ಯಗಳು ಹಾರಿ ಎಲ್ಲೆಂದರಲ್ಲಿ ಹರಡಿ ಕಸವಾಗಿ ಮಾರ್ಪಡುತ್ತಿವೆ.
ಹೆಪ್ಪುಗಟ್ಟಿದ ದಟ್ಟವಾದ ಮಂಜು ಆವರಿಸಿರುವುದರಿಂದ ಬಿಟ್ಟು ಹೋಗಿದ್ದ ಒಂದು ಟೆಂಟ್ ಉರುಳಿಸಲು ನಮಗೆ ಒಂದು ಗಂಟೆ ಬೇಕಾಯಿತು ಎಂದು ಶುಚಿತ್ವದಲ್ಲಿ ನಿರತರಾಗಿರುವ ಶೆರ್ಪಾ ಹೇಳಿದರು. ಕ್ಯಾಂಪ್ 4 ರಲ್ಲಿ ತ್ಯಾಜ್ಯ ಸೇರಿದಂತೆ 30 ಟೆಂಟ್ಗಳು ಹಾಗೆಯೇ ಉಳಿದಿವೆ. ಈ ಭಾಗದಲ್ಲಿ ಎಲ್ಲೆಂದರಲ್ಲಿ ಬಿಸಾಡಿರುವ ಅಂದಾಜು 5,000 ಕೆ.ಜಿ ಕಸ ಇರಬಹುದು ಎಂದು ಶೆರ್ಪಾ ಅಂದಾಜಿಸಿದ್ದಾರೆ.