ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋವಿಡ್ -19 ವಿರುದ್ಧ ಹೋರಾಡಲು ಪಶ್ಚಿಮ ಬಂಗಾಳದಲ್ಲಿ ಹೇರಲಾಗಿರುವ ನಿರ್ಬಂಧಗಳು ಮೇ 21ರ ವರೆಗೆ ಮುಂದುವರಿಯಲಿವೆ ಎಂದು ಮುಖ್ಯಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 'ನಿರ್ಬಂಧಗಳು ಮೇ 21ರ ವರೆಗೆ ಮುಂದುವರೆಯಬೇಕೆಂದು ನಾವು ಬಯಸುತ್ತೇವೆ. ಅಲ್ಲಿಯವರೆಗೂ ನಾವು ಎಚ್ಚರಿಕೆಯಿಂದ ಇರಬೇಕು' ಎಂದು ತಿಳಿಸಿದ್ದಾರೆ.
ನಾವು ಲಾಕ್ಡೌನ್ ವಿಸ್ತರಣೆಯನ್ನು ಘೋಷಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಮಮತಾ ಬ್ಯಾನರ್ಜಿ, ಆ ನಿರ್ಧಾರವನ್ನು ಕೇಂದ್ರ ಸರ್ಕಾರವು ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ನಾನು ನಿರ್ಬಂಧಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಇದು ಲಾಕ್ಡೌನ್ಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ರೆಡ್ ಝೋನ್ನಲ್ಲಿರುವ ವಲಯದಲ್ಲಿ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಕಿತ್ತಳೆ ವಲಯಗಳಲ್ಲಿ ಕೊರೊನಾ ಪರಿಣಾಮ ಕಡಿಮೆ ಇರುತ್ತದೆ. ಒಂದು ವೇಳೆ ಕಿತ್ತಳೆ ಝೋನ್ನಲ್ಲಿ ಪ್ರಕರಣಗಳ ಏರಿಕೆ ಕಂಡುಬಂದರೆ ಅಲ್ಲೂ ಕೂಡ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು. ಹಸಿರು ವಲಯಗಳಲ್ಲಿ ಹೆಚ್ಚಿನ ನಿರ್ಬಂಧ ಇರುವುದಿಲ್ಲ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.