ತಮಿಳುನಾಡು: ತಿರುಚ್ಚಿಯ ಮಣಪಾರೈ ಬಳಿಯ ನಡುಕಟ್ಟುಪತಿಯಲ್ಲಿ ಸುಮಾರು 25 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗುವನ್ನು ಉಳಿಸಲು ತೀವ್ರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಎರಡು ವರ್ಷದ ಬಾಲಕ ಸುಜಿತ್ ವಿಲ್ಸನ್ ಬಾವಿಗೆ ಬಿದ್ದ ಹುಡುಗ. ನಿನ್ನೆ ಸಂಜೆ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಈ ಬಾವಿಯನ್ನು ಏಳು ವರ್ಷದ ಹಿಂದೆ ಕೊರೆಯಲಾಗಿತ್ತು ಎಂದು ತಿಳಿದು ಬಂದಿದೆ.
ಬಾಲಕ ಬಾವಿಗೆ ಬಿದ್ದು ಸುಮಾರು 15 ಗಂಟೆಗಳೇ ಕಳೆದಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ವೈದ್ಯಕೀಯ ತಂಡ ಕೂಡ ಬೀಡು ಬಿಟ್ಟಿದ್ದು, ಬಾಲಕನಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಚೆನ್ನೈನಿಂದ ಎನ್ಡಿಆರ್ಫ್ ತಂಡ ಕೂಡ ಆಗಮಿಸಿದ್ದು, ರಕ್ಷಣೆ ಕಾರ್ಯದಲ್ಲಿ ತೊಡಗಿದೆ. ತಿರುಚ್ಚಿ ಜಿಲ್ಲಾಧಿಕಾರಿ ಶಿವರಸು ಮತ್ತು ಮೂವರು ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಸಲು ವಿಶೇಷ ಸಾಧನಗಳನ್ನು ತರಿಸಲಾಗುತ್ತಿದೆ. ಮಧುರೈ ಮೂಲದ ವಿಜ್ಞಾನಿ ಕಂಡುಹಿಡಿದ ವಿಶೇಷ ಸಾಧನವನ್ನು ಕಾರ್ಯಾಚರಣೆಗೆ ಬಳಸಲಾಗಿದೆ. ಆದರೆ ಕಳೆದ 5 ಗಂಟೆಗಳಿಂದ ಬಾಲಕನಿಂದ ಯಾವುದೇ ಪ್ರತಿಕ್ರಿಯೆ ಕೇಳಿಸುತ್ತಿಲ್ಲ ಎನ್ನಲಾಗಿದೆ. ಆದರೆ ಬಾಲಕ ಬದುಕಿರಬಹುದು ಎಂದು ಹೇಳಲಾಗ್ತಿದ್ದು, ಸುಸ್ತಾಗಿ ನಿದ್ರೆಗೆ ಜಾರಿರುವುದರಿಂದ ಯಾವುದೇ ಶಬ್ಧ ಕೇಳುತ್ತಿಲ್ಲ ಎಂದು ಸ್ಥಳದಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.
ಆರೋಗ್ಯ ಸಚಿವ ವಿಜಯಬಾಸ್ಕರ್, ಪ್ರವಾಸೋದ್ಯಮ ಸಚಿವ ನಟರಾಜನ್ ಮುಂತಾದ ಗಣ್ಯರು ಸ್ಥಳದಲ್ಲಿದ್ದಾರೆ. ಇನ್ನು ಬಾಲಕ ಸುಜಿತ್ ವಿಲ್ಸನ್ ಬದುಕಿ ಬರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಾರ್ಥನೆ ಮತ್ತು ಸಂದೇಶಗಳು # save sujith ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗ್ತಿದೆ.