ಲಖನೌ (ಉತ್ತರ ಪ್ರದೇಶ): ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವ ತನ್ನ ಕುಟುಂಬದ ಆರು ಮಂದಿಯನ್ನು ಕೊಲೆಗೈದು ಜೈಲು ಪಾಲಾದ ಘಟನೆ ಲಖನೌದಲ್ಲಿ ನಡೆದಿದೆ.
ಲಖನೌ ಹೊರವಲಯದಲ್ಲಿರುವ ಗುಡೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಜಯ್ ಸಿಂಗ್ ಎಂಬಾತ ತನ್ನ ತಂದೆ ಅಮರ್ ಸಿಂಗ್, ತಾಯಿ ರಾಮ್ ದುಲಾರಿ, ತಮ್ಮ ಅರುಣ್ ಸಿಂಗ್, ತಮ್ಮನ ಪತ್ನಿ ರಾಮ್ಸಖಿ, ಹಾಗೂ ಅವರಿಬ್ಬರ ಮಕ್ಕಳಾದ ಸೌರಭ್ ಹಾಗೂ ಸಾರಿಕಾ ಎಂಬುವವರನ್ನು ಕೊಚ್ಚಿ ಕೊಲೆ ಮಾಡಿ ತನ್ನ ಅಪ್ರಾಪ್ತ ಮಗನೊಂದಿಗೆ ಬಂತಾರಾ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಐವರ ಶವಗಳು ಹೊರಗೆ ಮನೆಯೊಳಗೆ ಪತ್ತೆಯಾಗಿದ್ದು, ಆರೋಪಿಯ ತಮ್ಮನ ಶವ ಮನೆಯಿಂದ ಹೊರಗೆ ಪತ್ತೆಯಾಗಿದೆ. ಕೊಲೆಯಾಗುವ ವೇಳೆ ಮನೆಯಿಂದ ಸಾಕಷ್ಟು ಚೀರಾಟಗಳು ಕೇಳಿಬರುತ್ತಿತ್ತು. ಆದರೆ ಯಾರೂ ಕೂಡಾ ಮನೆಯೊಳಗೆ ಪ್ರವೇಶಿಸಲು ಧೈರ್ಯ ತೋರಲಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆರೋಪಿಗೆ ಕೊಲೆ ಮಾಡಿದ್ದಕ್ಕೆ ಪಶ್ಚಾತ್ತಾಪವೇ ಇಲ್ಲ. ತಂದೆ ಹಾಗೂ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯಾದ ಐವರೂ ವ್ಯಕ್ತಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಂತಾರಾ ಪೊಲೀಸ್ ಠಾಣೆಯ ಅಧಿಕಾರಿ ರಮೇಶ್ ಸಿಂಗ್ ರಾವತ್ ಸ್ಪಷ್ಟಪಡಿಸಿದ್ದಾರೆ. ಘಟನೆಯ ಸ್ಥಳಕ್ಕೆ ಲಖ್ನೋ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.