ನವದೆಹಲಿ: ಎಂದಿನಂತೆ ಈ ಬಾರಿಯೂ ಕೂಡಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರೀಕ್ಷೆಯಂತೆ ಕೊರತೆ ಬಜೆಟ್ ಮಂಡಿಸಿದ್ದಾರೆ. ತೆರಿಗೆ ಸಂಗ್ರಹದ ವಿಚಾರವಾಗಿ ಯಾವುದೇ ಗಮನಾರ್ಹ ಬದಲಾವಣೆಯನ್ನು ತೆಗೆದುಕೊಂಡಿಲ್ಲ ಎಂದು ಅಂದಾಜಿಸಲಾಗಿದೆ. ಈ ಬಾರಿ ಕೇಂದ್ರ ಸರ್ಕಾರದ ಪ್ರಮುಖ ಆದಾಯದ ಮೂಲಗಳಾದ ಕಾರ್ಪೋರೇಟ್ ಟ್ಯಾಕ್ಸ್, ಆದಾಯ ತೆರಿಗೆ ಹಾಗೂ ಜಿಎಸ್ಟಿಗಳಲ್ಲಿ ಅಮೂಲಾಗ್ರ ಬದಲಾವಣೆ ತರದೇ ಇರೋದೇ ಈ ರೀತಿಯ ವಿಮರ್ಶೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಕೆಲವೇ ತಿಂಗಳಗಳ ಹಿಂದೆ ಆರ್ಥಿಕ ಹಿಂಜರಿತಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ನಲ್ಲಿ ಕಾರ್ಪೋರೇಟ್ ಟ್ಯಾಕ್ಸ್ ಕಡಿತಗೊಳಿಸಿದ್ದರು. ಸ್ಥಳೀಯ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಶೇ 31ರಿಂದ 32ರಷ್ಟಿದ್ದ ತೆರಿಗೆಯನ್ನು ಶೇ 25.12 ರಷ್ಟಕ್ಕೆ ಇಳಿಸಿದ್ದರು. ಈಗ ಮತ್ತೆ ಪ್ರಸ್ತುತ ಕಾರ್ಪೋರೇಟ್ ಟ್ಯಾಕ್ಸ್ ಇಳಿಸಿದ್ದಾರೆ. ಹೊಸದಾಗಿ ನಿರ್ಮಾಣವಾಗುವ ಕಂಪನಿಗಳಿಗೆ ಶೇ 25ರಿಂದ ಶೇ 15ಕ್ಕೆ ತೆರಿಗೆಯನ್ನು ಇಳಿಸಿ ಕಾರ್ಪೋರೇಟ್ ಸ್ನೇಹಿ ಬಜೆಟ್ ಅಂತ ಬಿಂಬಿಸಲು ಮುಂದಾಗಿದ್ದಾರೆ.
ನಿರೀಕ್ಷೆಯಂತೆ ಕಾರ್ಪೋರೇಟ್ ಟ್ಯಾಕ್ಸ್ ಕಡಿತದಿಂದಾಗಿ ಖಾಸಗಿ ಕಂಪನಿಗಳ ಹೂಡಿಕೆಗಳಿಗೆ ಉತ್ತೇಜನ ಸಿಗುತ್ತದೆ. ಆದರೆ ತೆರಿಗೆ ಸಂಗ್ರಹಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಒಟ್ಟು 15.05 ಲಕ್ಷ ಕೋಟಿಯನ್ನು ಮಾತ್ರ ತೆರಿಗೆಯಾಗಿ ಸಂಗ್ರಹಿಸಿದೆ. ಆದರೆ ಕೇಂದ್ರದ ಒಟ್ಟು ತೆರಿಗೆ ಸಂಗ್ರಹ ಗುರಿ 16.50 ಲಕ್ಷ ಕೋಟಿಯಷ್ಟಿತ್ತು. ನಿರ್ಮಲಾ ಸೀತಾರಾಮನ್ ತಮ್ಮ ಹೇಳಿಕೆಯೊಂದರಲ್ಲಿ 1.55 ಲಕ್ಷ ಕೋಟಿ ಹೊರೆಯಾಗಲಿದೆ ಎಂದಿದ್ದರು. ಆದರೆ ಈಗಿನ ಪ್ರಕಾರ, 2020ರ ಹಣಕಾಸು ವರ್ಷದಲ್ಲಿ ಒಟ್ಟು 1.45 ಕೋಟಿ ರೂಪಾಯಿ ಕೇಂದ್ರದ ಆದಾಯಕ್ಕೆ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಕೇವಲ ಕಾರ್ಪೋರೇಟ್ ಟ್ಯಾಕ್ಸ್ನಿಂದಲೇ 7.66 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಬಹುದು ಎಂದು ಅಂದಾಜಿಸಿದ್ದರು. ಕಾರ್ಪೋರೇಟ್ ಟ್ಯಾಕ್ಸ್ ನಂತರ ಜಿಎಸ್ಟಿಯಿಂದ 6.63 ಲಕ್ಷ ಕೋಟಿ ರೂಪಾಯಿ ಹಾಗೂ ಆದಾಯ ತೆರಿಗೆಯಿಂದ 5.669 ಲಕ್ಷ ಕೋಟಿ ಸಂಗ್ರಹದ ನಿರೀಕ್ಷೆಯಿತ್ತು.
ಆದರೆ ಕಳೆದ ವರ್ಷ ಕಾರ್ಪೋರೇಟ್ ಟ್ಯಾಕ್ಸ್ನಿಂದ ಸಂಗ್ರಹವಾಗಿದ್ದು 6.63 ಲಕ್ಷ ಕೋಟಿ ರೂಪಾಯಿ ಮಾತ್ರ. 2019ರ ಜುಲೈನಲ್ಲಿ 2020ರ ಹಣಕಾಸು ವರ್ಷದಲ್ಲಿ ಕಾರ್ಪೋರೇಟ್ ಟ್ಯಾಕ್ಸ್ ಬಗ್ಗೆ ಅಂದಾಜಿಸಿದ್ದ ನಿರ್ಮಲಾ ಸೀತಾರಾಮನ್ 7.66 ಲಕ್ಷ ಕೋಟಿ ಸಂಗ್ರಹವಾಗುತ್ತದೆ ಎಂದು ಹೇಳಿದ್ದರು. ಆದರೆ ಈಗ ಕೇವಲ 6.10 ಲಕ್ಷ ಕೋಟಿ ರೂಪಾಯಿಗಳು ಸಂಗ್ರಹವಾಗಬಹುದು ಎಂಬ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇದರಿಂದಾಗಿ ಬಜೆಟ್ ಟಾರ್ಗೆಟ್ಗಿಂತ ಶೇ 20ರಷ್ಟು ಕಡಿಮೆ ತೆರಿಗೆ ಸಂಗ್ರಹ ಕಡಿಮೆಯಾಗಲಿದೆ.
ಅದೇ ರೀತಿ, ನಿರ್ಮಲಾ ಸೀತಾರಾಮನ್ ಹೊಂದಿದ್ದ ಆದಾಯ ತೆರಿಗೆಯ ಗುರಿ 5.69 ಲಕ್ಷ ಕೋಟಿಯಷ್ಟಿದ್ದು ಈಗ 5.59 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಈ ಮೂಲಕ 10 ಸಾವಿರ ಕೋಟಿಗಳಷ್ಟು ಆದಾಯ ಸಂಗ್ರಹದ ಗುರಿಯನ್ನು ಕಡಿಮೆಗೊಳಿಸಲಾಗಿದೆ. ಜಿಎಸ್ಟಿಯಲ್ಲೂ ಕೂಡಾ ಬಜೆಟ್ ಟಾರ್ಗೆಟ್ 6.63 ಲಕ್ಷ ಕೋಟಿ ಇಟ್ಟುಕೊಳ್ಳಲಾಗಿತ್ತು. ಇದರಲ್ಲೂ ಇಳಿಕೆ ಕಂಡಿದ್ದು 6.12 ಲಕ್ಷ ಕೋಟಿಗೆ ಗುರಿ ಪರಿಷ್ಕರಿಸಲಾಗಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಜಿಎಸ್ಟಿಗಳಿಂದ 51 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಖೋತಾ ಆಗಲಿದೆ.
ಹಿಂದಿನ ವರ್ಷ ಆದಾಯ ತೆರಿಗೆ ಹಾಗೂ ಜಿಎಸ್ಟಿಯಲ್ಲಿ 5.81 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿದೆ. ಆದರೂ ಗುರಿ ತಲುಪಲಾಗಿಲ್ಲ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯ. ಹಿಂದಿನ ವರ್ಷ ಕಾರ್ಪೋರೇಟ್ ತೆರಿಗೆ ಹೆಚ್ಚಿತ್ತು ಆದ್ರೆ, ಟ್ಯಾಕ್ಸ್ ಸಂಗ್ರಹ ಕಡಿಮೆಯಾಗಿತ್ತು. ಆರ್ಥಿಕ ಹಿಂಜರಿತದ ನಂತರ ಟ್ಯಾಕ್ಸ್ ಏರಿಕೆಯಿದ್ದರೂ ಕೂಡಾ ಹೆಚ್ಚಿನ ಟ್ಯಾಕ್ಸ್ ಅನ್ನು ಸಂಗ್ರಹಿಸೋದು ಸಾಧ್ಯವಾಗಿರಲಿಲ್ಲ. 2020ರ ಹಣಕಾಸು ವರ್ಷದಲ್ಲಿ ಏನಾಗಲಿದೆ ಎಂಬುದನ್ನು ನಿರೀಕ್ಷಿಸಬೇಕಿದೆ.
- ಕೃಷ್ಣಾನಂದ ತ್ರಿಪಾಠಿ, ಹಿರಿಯ ಪತ್ರಕರ್ತರು