ನವದೆಹಲಿ: ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣವು ಸದ್ಯ 25.19% ರಷ್ಟಿದ್ದು, 14 ದಿನಗಳ ಹಿಂದೆ ಇದು 13.06% ಆಗಿತ್ತು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಮಾಣ 3.2%ದಷ್ಟಿದೆ. ಈವರೆಗೆ ಸೋಂಕಿನಿಂದ ಸಂಭವಿದ ಸಾವುಗಳಲ್ಲಿ 78% ರೋಗಿಗಳಲ್ಲಿ ಕೊಮೊರ್ಬಿಡಿಟೀಸ್ (ಇತರ ರೋಗಗಳೂ) ಕಂಡುಬಂದಿದೆ. 11 ದಿನಗಳಿಗೆ ಒಮ್ಮೆಯಂತೆ ದೇಶದಲ್ಲಿ ಕೊರೊನಾ ಪ್ರಕರಣ ದ್ವಿಗುಣಗೊಳ್ಳುತ್ತಿವೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಪರೀಕ್ಷೆ ಮತ್ತು ಚಿಕಿತ್ಸೆಯ ಪ್ರೋಟೋಕಾಲ್‌ಗೆ ಸಂಬಂಧಿಸಿದಂತೆ, ನಾವು ಆರ್‌ಟಿಪಿ-ಸಿಆರ್ ಪರೀಕ್ಷೆಯನ್ನು ಮಾತ್ರ ಬಳಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಹೈದರಾಬಾದ್‌ಗೆ ಭೇಟಿ ನೀಡಿರುವ ಕೇಂದ್ರ ತಂಡವು, ತೆಲಂಗಾಣ ರಾಜ್ಯದಲ್ಲಿ ಪಿಪಿಇ ಹಾಗೂ ಪರೀಕ್ಷಾ ಕಿಟ್ಗಳು ಸಮರ್ಪಕವಾಗಿದೆ ಎಂದು ಕಂಡುಹಿಡಿದಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ತಿಳಿಸಿದ್ದಾರೆ.
ಗೃಹ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿ ಮತ್ತು ರಾಜ್ಯಗಳು ಅಭಿವೃದ್ಧಿಪಡಿಸಿದ ಪ್ರೋಟೋಕಾಲ್‌ಗಳ ಪ್ರಕಾರ, ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ಅಂತರ್ರಾಜ್ಯ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿದೆ ಎಂದು ಪುಣ್ಯ ಸಲೀಲಾ ತಿಳಿಸಿದ್ದಾರೆ.