ನವದೆಹಲಿ / ಜಿನೀವಾ: ಕೋವಿಡ್ -19ನಿಂದಾಗಿ ದೀರ್ಘಕಾಲದ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಿರುವುದು ವಿಶ್ವದಾದ್ಯಂತದ ಕಂಪನಿಗಳಿಗೆ ಅತಿದೊಡ್ಡ ಆತಂಕವಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ನಡೆಸಿದ ಅಧ್ಯಯನ ವರದಿಯಲ್ಲಿ ಈ ರೀತಿಯಾಗಿ ಹೇಳಲಾಗಿದೆ.
"ಕೋವಿಡ್-19 ಪರಿಣಾಮವನ್ನು ನಿರ್ವಹಿಸಲು ವಿಶ್ವ ನಾಯಕರು, ವ್ಯವಹಾರ ಸಂಸ್ಥೆಗಳು ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡದಿದ್ದರೆ ಮುಂದಿನ 18 ತಿಂಗಳುಗಳಲ್ಲಿ ಆರ್ಥಿಕ ಯಾತನೆ ಹೆಚ್ಚಾಗುತ್ತದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿದ್ದಂತೆ, ಸಾಮಾಜಿಕ ಸಮಾನತೆ ಮತ್ತು ಸುಸ್ಥಿರತೆಯ ಚೇತರಿಕೆಯ ಅಗತ್ಯವಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ನಡುವೆ ಸಹಕಾರ ಅಗತ್ಯವಿದೆ ಎಂದು ಜಿನೀವಾ ಮೂಲದ ಡಬ್ಲ್ಯುಇಎಫ್ ಹೇಳಿದೆ.
'ಕೋವಿಡ್-19 ರಿಸ್ಕ್ ಟು ಔಟ್ಲುಕ್: ಎ ಪ್ರಿಲಿಮಿನರಿ ಮ್ಯಾಪಿಂಗ್ ಆ್ಯಂಡ್ ಇಟ್ಸ್ ಇಂಪ್ಲಿಕೇಶನ್ಸ್' ಎಂಬ ಶೀರ್ಷಿಕೆಯ ಅಧ್ಯಯನವನ್ನು ಮಾರ್ಷ್ ಮತ್ತು ಮೆಕ್‌ಲೆನ್ನನ್ ಹಾಗೂ ಜೂರಿಚ್ ಇನ್ಶುರೆನ್ಸ್ ಸಮೂಹದ ಸಹಭಾಗಿತ್ವದಲ್ಲಿ ನಡೆಸಲಾಗಿದೆ. ಇದು ಸುಮಾರು 18 ಹಿರಿಯ ವೃತ್ತಿಪರರ ಅಭಿಪ್ರಾಯಗಳನ್ನು ಒಳಗೊಂಡಿದೆ.
ಕೋವಿಡ್-19ನಿಂದಾದ ಆರ್ಥಿಕ ಕುಸಿತವು ಕಂಪನಿಗಳಗೆ ಅಪಾಯ ತಂದೊಡ್ಡಲಿವೆ. ಅದರ ಜೊತೆಗೆ ಪ್ರಮುಖ ಉದಯೋನ್ಮುಖ ಮಾರುಕಟ್ಟೆಯಲ್ಲಿಯೂ ಕುಸಿತವಾಗಲಿದೆ. ಉದ್ಯಮದ ಬಲವರ್ಧನೆ, ಕೈಗಾರಿಕೆಗಳನ್ನು ಚೇತರಿಸುವುದು, ಪೂರೈಕೆಯನ್ನು ಅಧಿಕಗೊಳಿಸುವುದೇ ದೊಡ್ಡ ಸವಾಲಾಗಲಿದೆ ಎಂದು ಡಬ್ಲ್ಯುಇಎಫ್ ಹೇಳಿದೆ.
ಡಬ್ಲ್ಯುಇಎಫ್‌ನ ಇನ್ನೊಂದು ಅಧ್ಯಯನವಾದ 'ಪೋಸ್ಟ್-ಕೋವಿಡ್ -19 ಪ್ರಪಂಚದಲ್ಲಿನ ಸವಾಲುಗಳು ಮತ್ತು ಅವಕಾಶಗಳು' ಇದರ ವರದಿ ಕೂಡಾ ಪ್ರಕಟಗೊಂಡಿದ್ದು, ಇದರಲ್ಲಿ ಹೊಸ ಅವಕಾಶಗಳ ಕುರಿತು ತಿಳಿಸಲಾಗಿದೆ. ಸಂಶೋಧಕರು, ವಿಜ್ಞಾನಿಗಳು ಮತ್ತು ನಾಯಕರ ಅಭಿಪ್ರಾಯಗಳನ್ನೊಳಗೊಂಡ ಈ ಅಧ್ಯಯನ ಸಮೃದ್ಧ ಆರ್ಥಿಕತೆ ಮತ್ತು ಸುಸ್ಥಿರ ಜಗತ್ತು ನಿರ್ಮಿಸುವುದರ ಕುರಿತು ತಿಳಿಸುತ್ತದೆ.