ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರ ಕೊನೆಯ ಹಂತ ತಲುಪಿದ್ದು, ಅಭ್ಯರ್ಥಿಗಳು ಕೊನೇ ಕ್ಷಣದ ಕಸರತ್ತಿನಲ್ಲಿ ತೊಡಗಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಗ್ಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಒಟ್ಟಾರೆ 288 ಕ್ಷೇತ್ರದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 75 ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳೇ ಪ್ರಾಬಲ್ಯ ಸಾಧಿಸಿದ್ದಾರೆ.
ಸದ್ಯ ಅಧಿಕಾರದಲ್ಲಿರುವ ಬಿಜೆಪಿಯೇ ಈ ಬಂಡಾಯದಲ್ಲಿ ಹೆಚ್ಚು ಹೊಡೆತ ತಿನ್ನುವ ಲಕ್ಷಣ ಕಂಡು ಬಂದಿದೆ. ಬರೋಬ್ಬರಿ 38 ಕ್ಷೇತ್ರದಲ್ಲಿ ಬಿಜೆಪಿಯಿಂದ ಬಂಡಾಯ ಎದ್ದು ಹೋದವರೇ ಕಣಕ್ಕಿಳಿದಿದ್ದಾರೆ. ಇನ್ನುಳಿದಂತೆ ಶಿವಸೇನಾ(23), ಕಾಂಗ್ರೆಸ್(9) ಹಾಗೂ ಎನ್ಸಿಪಿ(4) ರೆಬೆಲ್ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬಿಜೆಪಿ- ಶಿವಸೇನಾ ಮೈತ್ರಿಗೂ ಮುನ್ನ ಎರಡೂ ಪಕ್ಷದಲ್ಲಿ ಹಲವರು ಟಿಕೆಟ್ಗಾಗಿ ಲಾಬಿ ನಡೆಸಿದ್ದರು. ಆದರೆ, ಮೈತ್ರಿ ಬಳಿಕ ಹಲವರಿಗೆ ನಿರಾಸೆಯಾಗಿತ್ತು. ಈ ನಿರಾಸೆ ಬಂಡಾಯಕ್ಕೆ ದಾರಿ ಮಾಡಿಕೊಟ್ಟಿತ್ತು. ಕಾಂಗ್ರೆಸ್ ಹಾಗೂ ಎನ್ಸಿಪಿಯೂ ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಆ ಎರಡು ಪಕ್ಷದಲ್ಲಿ ಬಂಡಾಯದ ಹೊಗೆ ಕೊಂಚ ಕಮ್ಮಿ ಇದೆ. ಆದರೂ ಒಂದಷ್ಟು ಕ್ಷೇತ್ರದಲ್ಲಿ ಇವೆರಡೂ ಪಕ್ಷಗಳಿಗೆ ದೊಡ್ಡ ಹಿನ್ನಡೆಯಾದರೆ ಅಚ್ಚರಿಯಿಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಅ.21ರಂದು ಮತದಾನ ನಡೆಯಲಿದ್ದು, ಅ.24ರಂದು ಮತಎಣಿಕೆ ನಡೆಯಲಿದೆ.