ನವದೆಹಲಿ: ಟಾಟಾ ಸಮೂಹ ಕಂಪನಿಯ ಅಧ್ಯಕ್ಷ ರತನ್ ನಾವಲ್ ಟಾಟಾ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದು, ಇನ್ಸ್ಟಾಗ್ರಾಂನಲ್ಲಿ ತಮ್ಮ ಹಳೆಯ ಫೋಟೊವೊಂದನ್ನ ಹಾಕುವುದರ ಮೂಲಕ ನೆಟ್ಟಿಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಥ್ರೋಬ್ಯಾಕ್ ಮೆಮೊರಿಗಳು ಆಗಾಗ ಫೇಮಸ್ ಆಗುತ್ತಲೇ ಇರುತ್ತವೆ. ಅದೇ ರೀತಿ ರತನ್ ಟಾಟಾ ಕೂಡ ತಮ್ಮ 25ನೇ ವಯಸ್ಸಿನಲ್ಲಿ ಲಾಸ್ ಏಂಜಲೀಸ್ನಲ್ಲಿ ತೆಗೆದಿದ್ದ ಫೋಟೊ ಹಾಕಿದ್ದು, "ನಾನು ಈ ಫೋಟೊವನ್ನು ನಿನ್ನೆಯೇ ಶೇರ್ ಮಾಡಬೇಕು ಎಂದುಕೊಂಡಿದ್ದೆ, ಆದರೆ ಸಾಮಾಜಿಕ ಜಾಲತಾಣದ ಥ್ರೋಬ್ಯಾಕ್ ಮೆಮೊರಿಗಳ ಬಗ್ಗೆ ತಿಳಿಯಿತು. ನಾನು ಲಾಸ್ ಏಂಜಲೀಸ್ನಲ್ಲಿದ್ದ ಅಂದರೆ ಸಂತೋಷದಿಂದ ಭಾರತಕ್ಕೆ ಮರಳುವ ಸ್ವಲ್ಪ ಸಮಯದ ಮೊದಲು ತೆಗೆದ ಫೋಟೊವನ್ನು ಹಾಕುತ್ತಿದ್ದೇನೆ" ಎಂದು ಇನ್ಸ್ಟಾ ವಾಲ್ನಲ್ಲಿ ಬರೆದಿದ್ದಾರೆ.
ಟಾಟಾ ಹಾಕಿದ ಫೋಟೊಗೆ ನೆಟ್ಟಿಗರು ಫಿದಾ ಆಗಿದ್ದು, ಪೋಟೊ ಅಪ್ಲೋಡ್ ಆದ ಒಂದೇ ಗಂಟೆಯಲ್ಲಿ ಸಾವಿರಾರು ಕಮೆಂಟ್ಸ್ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಗಳು ವ್ಯಕ್ತವಾಗಿದವೆ.
ಈ ಫೋಟೊಗೆ ಕಮೆಂಟ್ಗಳ ಸುರಿಮಳೆ ಸುರಿದಿದ್ದು, ಈ ಫೋಟೊವನ್ನು ನೋಡಿ ಇವರು ಹಾಲಿವುಡ್ ಸ್ಟಾರ್ ಇರಬೇಕು ಎಂದು ತಿಳಿದಿದ್ದೆ, 80ರ ವಯಸ್ಸಿನಲ್ಲೂ ನೀವೂ ಸ್ಮಾರ್ಟ್ ಆಗಿದ್ದೀರಿ ಸಾರ್, ನೀವು ದೇವರಿದ್ದಂತೆ, ನೀವು ಯಾವಾಗಲೂ ಹ್ಯಾಂಡ್ಸಮ್. ಹೀಗೆ ಸಾವಿರಾರು ರೀತಿಯಲ್ಲಿ ಅಭಿಮಾನಿಗಳು ತಮ್ಮ ಸಂತೋಷವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ರತನ್ ಟಾಟಾ 2018ರ ಅಕ್ಟೋಬರ್ 30 ರಂದು ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದು, ವಿವಿಧ ರೀತಿಯ ಅಭಿಪ್ರಾಯ ಹಾಗೂ ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇನೆ ಎಂದಿದ್ದರು.