ಹೈದರಾಬಾದ್: ತೆಲಂಗಾಣದ ಹೈದರಾಬಾದ್ನ ಜಗದ್ಗಿರಿಗುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ದತ್ತಾತ್ರೇಯ ಕಾಲೋನಿಯಲ್ಲಿ ಅತ್ಯಾಚಾರ ಆರೋಪಿ, ಕೋಪಗೊಂಡ ಜನಸಮೂಹದಿಂದ ಪರಾರಿಯಾಗಲು ಮುಂದಾದಾಗ ಬಿದ್ದು ಸಾವನ್ನಪ್ಪಿದ್ದಾನೆ.
ಮೃತ ಮಹೀಪಾಲ್ ರೆಡ್ಡಿ(40) ಎಂಬಾತ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸ್ಥಳೀಯರ ಪ್ರಕಾರ, ಮಹಿಪಾಲ್ ಮಗುವನ್ನು ಕಟ್ಟಡದ ಮೂರನೇ ಮಹಡಿಗೆ ಕರೆದೊಯ್ದುಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ನಂತರ ಕೆಲವು ಸ್ಥಳೀಯರು ಸ್ಥಳಕ್ಕೆ ತಲುಪುತ್ತಿದ್ದಂತೆಯೆ ಕೂಡಲೇ ಆತ ಕಾಲ್ಕಿತ್ತಿದ್ದಾನೆ. ಇನ್ನೂ ಮಗುವಿನ ದೇಹದ ಮೇಲೆ ಕೆಂಪು ಗುರುತುಗಳಾಗಿದ್ದು ಗಮನಕ್ಕೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನಲೆ ನಿವಾಸಿಗಳು ಆರೋಪಿಗಳನ್ನು ಹುಡುಕಲು ಪ್ರಾರಂಭಿಸಿದರು. ಈ ವೇಳೆ ಆರೋಪಿ ಕೋಪಗೊಂಡಿದ್ದ ಜನರ ಕಣ್ಣಿಗೆ ಬಿದ್ದಿದ್ದು, ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಓಡಿ ಹೋಗಲೆತ್ನಿಸುವ ವೇಳೆ ಕೆಳಗೆ ಬಿದಿದ್ದಾನೆ. ಈ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.