ನವದೆಹಲಿ: ಮೊಟ್ಟೆ, ಬಾಳೆಹಣ್ಣು ಮೊದಲಾದ ಪದಾರ್ಥಗಳಿಗೆ ಪಂಚತಾರಾ ಹೋಟೆಲ್ಗಳು ವಿಧಿಸುತ್ತಿರುವ ದುಬಾರಿ ಬೆಲೆ ಕುರಿತು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಕಿಡಿ ಕಾರಿದ್ದು, ಈ ಕುರಿತು ವಿವರಣೆ ಕೇಳಿದ್ದಾರೆ.
ಹೋಟೆಲ್ಗಳು ವಿಧಿಸುತ್ತಿರುವ ಈ ರೀತಿಯ ಅವೈಜ್ಞಾನಿಕ ಬೆಲೆಯನ್ನು ಗ್ರಾಹಕರ ಹಕ್ಕುಗಳ ರಕ್ಷಣೆ ಕಾಯ್ದೆಯಡಿಯಲ್ಲಿ ತಂದು ಒಂದು ಬೆಲೆ ನಿಗದಿಪಡಿಸಲು ನಿರ್ಧರಿಸಲಾಗಿದ್ದು, ಕೇಂದ್ರದ ಈ ಪ್ರಸ್ತಾವನೆಗೆ ಸಮ್ಮತಿ ಸಿಕ್ಕಲ್ಲಿ ಸಾಮಾನ್ಯರೂ ಕೂಡ ಸ್ಟಾರ್ ಹೋಟೆಲ್ಗಳ ಊಟ ಸವಿಯಬಹುದಾಗಿದೆ.
ಬಾಲಿವುಡ್ ನಟ ರಾಹುಲ್ ಬೋಸ್ ಅವರು ಚಂಡೀಗಢದ ಜೆಡಬ್ಲ್ಯೂ ಮಾರಿಯಟ್ ಹೋಟೆಲ್ನಲ್ಲಿ ಎರಡು ಬಾಳೆಹಣ್ಣಿಗೆ 442 ರೂಪಾಯಿ ದರ ವಿಧಿಸಿದ್ದರ ಬಗ್ಗೆ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರು ತಮಗಾದ ಅನುಭವವನ್ನು ಬಿಚ್ಚಿಟ್ಟರು. ಎರಡು ಮೊಟ್ಟೆಗೆ 1700 ರೂ. ವಿಧಿಸಿದ್ದರ ಬಗ್ಗೆಯೂ ದೂರು ದಾಖಲಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಸ್ವಾನ್ ಅವರು ಇದು ಗ್ರಾಹಕರ ರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಸ್ಟಾರ್ ಹೋಟೆಲ್ಗಳ ಆಹಾರ ದರವನ್ನು ಇಲಾಖೆಯೇ ನಿರ್ಧಿಸುವ ಸಾಧ್ಯತೆಯನ್ನು ಬಿಚ್ಚಿಟ್ಟಿದ್ದಾರೆ.