ಜೈಪುರ್: ರಾಜ್ಯಸಭೆಯ ಖಾಲಿ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಮೂರು ದಿನಗಳು ಬಾಕಿರುವಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಮುಂದುವರೆದಿದೆ. ಕೆಲವೆಡೆ ಕುದುರೆ ವ್ಯಾಪಾರದ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದ್ದ ಬೆನ್ನಲ್ಲೇ ರಾಜಸ್ಥಾನದ ಬಿಜೆಪಿ ಶಾಸಕರನ್ನು ಕಾರ್ಯಾಗಾರಕ್ಕಾಗಿ ಹೋಟೆಲ್‌ಗೆ ಶಿಫ್ಟ್ ಮಾಡುವುದಾಗಿ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜೂನ್ 19 ರಂದು ರಾಜ್ಯಸಭೆಗೆ ಖಾಲಿ ಇರುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾನದ ಕುರಿತು ಶಾಸಕರಿಗೆ ಎರಡು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ರಾಜ್ಯದ ಎಲ್ಲಾ ಬಿಜೆಪಿ ಶಾಸಕರನ್ನು ಹೋಟೆಲ್‌ಗೆ ಸ್ಥಳಾಂತರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು. ರಾಜ್ಯಸಭಾ ಚುನಾವಣೆ 2 ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದ್ರೆ ಇವರು ಚುನಾವಣೆಯನ್ನು ಮುಂದೂಡಿದ್ರು. ಬಿಜೆಪಿಯ ಕುದುರೆ ವ್ಯಾಪಾರ ಇನ್ನೂ ಮುಗಿದಿರಲಿಲ್ಲ ಎಂದು ದೂರಿದ್ದರು.
ರಾಜ್ಯಸಭಾ ಚುನಾವಣೆ ಘೋಷಣೆಯದ ಬೆನ್ನಲ್ಲೇ ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರಾದ ಬ್ರಿಜೇಶ್, ಅಕ್ಷಯ್ ಪಾಟೇಲ್, ಜಿತು ಚೌಧರಿ ರಾಜೀನಾಮೆ ನೀಡಿದ್ದರು. ಅಲ್ಲಿ ಶಾಸಕರ ರಾಜೀನಾಮೆ ನೀಡಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು.
ಚುನಾವಣೆ ಆಯೋಗ ಮಾರ್ಚ್ 26 ರಂದು ರಾಜ್ಯಸಭೆಯ ಚುನಾವಣೆಗೆ ದಿನಾಂಕ ಘೋಷಿಸಿತ್ತು. ಆದ್ರೆ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗಿದ್ದರಿಂದ ಎರಡು ತಿಂಗಳ ವರೆಗೆ ಚುನಾವಣೆಯನ್ನು ಮುಂದೂಡಿತ್ತು.