ನವದೆಹಲಿ: ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳ ಮಸೂದೆಯನ್ನು ರಾಜ್ಯಸಭೆಯಲ್ಲಿ ಹಲವಾರು ಸದಸ್ಯರು ಬೆಂಬಲಿಸಿದರು. ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಮಾರ್ಚ್ 2 ರಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಮೇಲ್ಮನೆಯಲ್ಲಿ ಮಂಡಿಸಿದ್ದರು.
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಎಐಟಿಸಿಯ ಸುಖೇಂಡು ಶೇಖರ್ ರಾಯ್, ಬಿಜೆಡಿಯ ಪ್ರಶಾಂತ್ ನಂದಾ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ 2019 ರ ಮಸೂದೆ ಚರ್ಚೆಯಲ್ಲಿ ಪಾಲ್ಗೊಂಡು ಸಂಸ್ಕೃತದಲ್ಲಿ ಮಾತನಾಡಿದರು.
ಈ ಮಸೂದೆಯು ಭಾರತದ ಮೂರು ಪರಿಗಣಿತ ಸಂಸ್ಕೃತ ವಿಶ್ವವಿದ್ಯಾಲಯಗಳನ್ನು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ಅವುಗಳೆಂದರೆ ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಮತ್ತು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ.
ಪ್ರಸ್ತಾವಿತ ಕೇಂದ್ರೀಯ ವಿಶ್ವವಿದ್ಯಾಲಯಗಳು ಸಂಸ್ಕೃತದ ಬಗ್ಗೆ ಹೆಚ್ಚಿನ ಪ್ರಚಾರಕ್ಕಾಗಿ ಒತ್ತನ್ನು ನೀಡಲಿವೆ. ಎಲ್ಲ ಕೇಂದ್ರ ವಿಶ್ವವಿದ್ಯಾಲಯಗಳಂತೆ ಭಾರತದ ರಾಷ್ಟ್ರಪತಿಗಳು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳ ಸಂದರ್ಶಕರಾಗಲಿದ್ದಾರೆ. ಅವರು ವಿಶ್ವವಿದ್ಯಾಲಯದ ಕಾರ್ಯವೈಖರಿಯನ್ನು ಪರಿಶೀಲಿಸಲು ವ್ಯಕ್ತಿಗಳನ್ನು ನೇಮಿಸಲಿದ್ದಾರೆ.