ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಸಶಸ್ತ್ರ ಪಡೆಗಳ ಸನ್ನದ್ಧತೆಯ ಬಗ್ಗೆ ಮಾಹಿತಿ ಪಡೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ದೇಶದ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್. ಕೆ. ಎಸ್ ಭದೌರಿಯಾ ಮತ್ತು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಾನೆ ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಜಿ. ಸತೀಶ್ ರೆಡ್ಡಿ ಮತ್ತು ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗವನ್ನು ಎದುರಿಸಲು ಅವರ ಸನ್ನದ್ಧತೆ ಮತ್ತು ಉಸಿರಾಟದ ಕಾಯಿಲೆ ವಿರುದ್ಧ ಸಶಸ್ತ್ರ ಪಡೆಗಳ ಸಿಬ್ಬಂದಿ ರಕ್ಷಿಸಲು ಕೈಗೊಂಡ ಕ್ರಮಗಳ ಬಗ್ಗೆ ರಕ್ಷಣಾ ಸಚಿವರು ಉನ್ನತ ಮಿಲಿಟರಿ ಅಧಿಕಾರಿಗಳನ್ನು ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.