ನವದೆಹಲಿ: ಭಾರತದ ಖಾಸಗಿ ಉದ್ಯಮಗಳಿಗೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಹೊಸ ಮಾರ್ಗಸೂಚಿಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ಈ ಮೂಲಕ ಡಿಫೆನ್ಸ್ ರಿಸರ್ಚ್ ಹಾಗೂ ಡೆವೆಲೆಪ್ಮೆಂಟ್ ಆರ್ಗನೈಸೇಷನ್ (ಡಿಆರ್ಡಿಓ)ನಲ್ಲಿ ಪಾಲ್ಗೊಳ್ಳಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ರಕ್ಷಣಾ ವಿಭಾಗದಲ್ಲಿ ಸ್ವಾಯುತ್ತತೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ.
ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್ ಬಿಡುಗಡೆಯಾದ ಹೊಸ ನಿಯಮಗಳು ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಭಾರತ ಕನಸಿಗೆ ನೀರೆರೆಯುತ್ತವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಖಾಸಗಿ ಸಂಸ್ಥೆಗಳು ಡಿಆರ್ಡಿಓದಲ್ಲಿ ಪಾಲ್ಗೊಳ್ಳಲು ಮತ್ತಷ್ಟು ಸರಳವಾಗುವ ನಿಯಮಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ ಸಾಧಿಸುವ ಕಾರಣದಿಂದ ಹೊಸ ನೀತಿಗಳನ್ನು ರಚಿಸಲಾಗಿದ್ದು, ರಕ್ಷಣಾ ಸಚಿವರ ಕಚೇರಿ ಒಪ್ಪಿಗೆ ನೀಡಿದೆ ಎಂದು ಹೇಳಿದ್ದರು.
ಮತ್ತೊಂದು ಟ್ವೀಟ್ನಲ್ಲಿ ಹೊಸ ನಿಯಮಾವಳಿಗಳ ಪ್ರಕಾರ ಭಾರತದ ಸ್ಟಾರ್ಟ್ ಅಪ್ಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಡಿಆರ್ಡಿಓದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಭರವಸೆ ನೀಡಿದ್ದರು.