ಜೈಪುರ: ರಾಜಸ್ಥಾನ ಸರ್ಕಾರವೂ ಕಾರ್ಖಾನೆಗಳಲ್ಲಿನ ಕಾರ್ಮಿಕರ ಕೆಲಸದ ಅವಧಿಯನ್ನ ದಿನಕ್ಕೆ 12 ಗಂಟೆಗೆ ಹೆಚ್ಚಿಸಿತ್ತು. ಆದ್ರೀಗ ಕಾರ್ಮಿಕರಿಗೆ ವಿಶ್ರಾಂತಿ ನೀಡುವ ಸಲುವಾಗಿ ಹಿಂದಿನ ಆದೇಶವನ್ನು ಹಿಂಪಡೆದು, ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಕೆ ಮಾಡಿದೆ.
ಕಾರ್ಖಾನೆಗಳಲ್ಲಿ ದೈನಂದಿನ ಕೆಲಸದ ಅವಧಿಯನ್ನು ತಾತ್ಕಾಲಿಕವಾಗಿ 8 ರಿಂದ 12 ಗಂಟೆಗಳವರೆಗೆ ಹೆಚ್ಚಿಸಲಾಗಿತ್ತು. ಈ ನಿರ್ಧಾರವನ್ನು ಗೆಹ್ಲೋಟ್ ಸರ್ಕಾರವೂ ಹಿಂಪಡೆದಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಟಿಕಾರಮ್ ಜುಲ್ಲಿ ಮಾಹಿತಿ ನೀಡಿದ್ದಾರೆ.
ಎಲ್ಲ ಕಾರ್ಖಾನೆಗಳಿಗೆ ಲಾಕ್‌ಡೌನ್ 4.0 ನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಹಸಿರು ಮತ್ತು ಹಳದಿ ವಲಯಗಳ ಅಡಿಯಲ್ಲಿರುವ ಹೆಚ್ಚಿನ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸಲಾಗಿದೆ. ಹಾಗಾಗಿ ಕಾರ್ಮಿಕರಿಗೆ ಪ್ರಯಾಣಕ್ಕೆ ಇನ್ಮುಂದೆ ಪಾಸ್ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಕಾರ್ಖಾನೆಗಳು ಕಾರ್ಯನಿರ್ವಹಿಸುವಂತೆ ಕಾರ್ಮಿಕ ಸಚಿವಾಲಯ ಹೇಳಿದೆ. ಎಲ್ಲ ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಮತ್ತು ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುವಂತೆ ಸರ್ಕಾರ ಸೂಚಿಸಿದೆ.