ಜೈಪುರ (ರಾಜಸ್ಥಾನ): 'ಕೊರೊನಿಲ್' ಔಷಧ ಸಂಶೋಧನೆಗೆ ಸಂಬಂಧಿಸಿದಂತೆ ಉತ್ತರ ಕೋರಿ ರಾಜಸ್ಥಾನ ಹೈಕೋರ್ಟ್ ಯೋಗ ಗುರು ರಾಮದೇವ್ ಅವರ ಪತಂಜಲಿ, ನಿಮ್ಸ್ ವಿಶ್ವವಿದ್ಯಾಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ.
ಪತಂಜಲಿ, ರಾಜ್ಯ ಸರ್ಕಾರ, ಕೇಂದ್ರ ಆಯುಷ್ ಸಚಿವಾಲಯ, ಐಸಿಎಂಆರ್, ಮತ್ತು ರಾಜಸ್ಥಾನದ ನಿಮ್ಸ್ ವಿಶ್ವವಿದ್ಯಾಲಯ ಔಷಧ ತಯಾರಿಕೆಯಲ್ಲಿ ಕಂಪನಿಯೊಂದಿಗೆ ಸಹಕರಿಸಿದ್ದಾರೆ. ಹೀಗಾಗಿ ಅವರು ಉತ್ತರಗಳನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಎಸ್.ಕೆ ಸಿಂಗ್ ಸಲ್ಲಿಸಿದ್ದ ಮನವಿಯಲ್ಲಿ, ಪತಂಜಲಿ ಸರಿಯಾದ ಪರೀಕ್ಷೆಯಿಲ್ಲದೇ ಔಷಧವನ್ನು ಬಿಡುಗಡೆ ಮಾಡಿದ್ದು, ಆಯುಷ್ ಮತ್ತು ಐಸಿಎಂಆರ್ ಕೂಡಾ ಸಹಕಾರ ನೀಡಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಉತ್ತರಾಖಂಡ ಹೈಕೋರ್ಟ್ ಕೂಡಾ ಇದೇ ರೀತಿಯ ನೋಟಿಸ್ ನೀಡಿತ್ತು. ರೋಗನಿರೋಧಕ ವರ್ಧಕವಾಗಿ ಮಾತ್ರ ಪತಂಜಲಿ 'ಕೊರೊನಿಲ್' ಮಾರಾಟ ಮಾಡಬಹುದು ಎಂದು ಕೇಂದ್ರ ಆಯುಷ್ ಸಚಿವಾಲಯ ಹೇಳಿದೆ.
"ಕೋವಿಡ್ ಟ್ರೀಟ್ಮೆಂಟ್" ಬದಲಿಗೆ "ಕೋವಿಡ್ ಮ್ಯಾನೇಜ್ಮೆಂಟ್" ಎಂಬ ಪದ ಬಳಸಲು ಆಯುಷ್ ಸಚಿವಾಲಯ ತಿಳಿಸಿದೆ. ಅವರು ನೀಡಿದ ಸೂಚನೆಯನ್ನು ಅನುಸರಿಸಲಾಗುತ್ತಿದೆ ಎಂದು ರಾಮದೇವ್ ಹೇಳಿದ್ದಾರೆ.