ಜಲೋರ್(ರಾಜಸ್ಥಾನ್): ಜೈಪುರ ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನದ ವಿರುದ್ಧ ಜಿಲ್ಲೆಯ ರೈತರು ಆಂದೋಲನವನ್ನು ಪ್ರಾರಂಭಿಸಿದ್ದು, ನೆಲದಲ್ಲಿ ಗುಂಡಿ ತಗೆದು ತಮ್ಮನ್ನು ತಾವು ಕುತ್ತಿಗೆವರೆಗೆ ಹೂತುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಭಾರತಮಾಲಾ ಯೋಜನೆಯಡಿ ಉದ್ದೇಶಿತ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಭೂರಹಿತ ರೈತರನ್ನಾಗಿಸಿದ್ದಾರೆ ಎಂದು ಆರೋಪಿಸಿ ಈ ಆಂದೋಲನವನ್ನು ಪ್ರಾರಂಭಿಸಲಾಗಿದೆ.
ಜೈಪುರ ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನದ ವಿರುದ್ದ ಕಳೆದ 10 ದಿನಗಳಿಂದ ಈ ಹೋರಾಟ ನಡೆಸುತ್ತಿದ್ದರೂ ಯಾವೊಬ್ಬ ನಾಯಕನಾಗಲಿ, ಅಧಿಕಾರಿಗಳಾಗಲಿ ಇತ್ತ ಮುಖ ಹಾಕಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಹಳ್ಳಿಗರು ಇದೀಗ ಉಪವಾಸ ಸತ್ಯಾಗ್ರಹ ಸಹ ಕೈಗೊಂಡಿದ್ದಾರೆ.
ಈ ಹೋರಾಟದಲ್ಲಿ 6 ಮಹಿಳೆಯರು ಸೇರಿದಂತೆ 22 ರೈತರು ಸಮಾಧಿ ಹೋರಾಟವನ್ನು ಕೈಗೊಂಡಿದ್ದು, 221 ರೈತರು ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನ ಮಾಡುತ್ತಿದ್ದಾರೆ.
ಭಾರತಮಾಲಾ ಯೋಜನೆಯಡಿ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಮಾಡಲು 600 ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಸರಿಯಾದ ಪರಿಹಾರವನ್ನೂ ಸಹ ಇದೂವರೆಗೆ ನೀಡಿಲ್ಲ ಎಂಬ ಆರೋಪ ಹಳ್ಳಿಗರದ್ದಾಗಿದೆ.