ಜೈಪುರ: ಶಾಸಕರಿಗೆ ಆಮಿಷವೊಡ್ಡುವ ಮೂಲಕ ರಾಜ್ಯದ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ರಾಜಸ್ಥಾನದ 24 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾತ್ರೋರಾತ್ರಿ ಜಂಟಿ ಹೇಳಿಕೆ ಹೊರಡಿಸಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಮಹೇಶ್ ಜೋಶಿ ಮತ್ತು ಮಹೇಂದ್ರ ಚೌಧರಿ ಸಹಿ ಇರುವ 24 ಕೈ ಶಾಸಕರ ಪರವಾಗಿ ಜಂಟಿ ಹೇಳಿಕೆಯನ್ನು ಹೊರಡಿಸಲಾಗಿದೆ. ಇದರಲ್ಲಿ ಯಾರನ್ನೂ ಹೆಸರಿಸದೆ, ಕಾಂಗ್ರೆಸ್ ಅನ್ನು ದಾರಿ ತಪ್ಪಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ ಮತ್ತು ಪಕ್ಷದ ಶಾಸಕರನ್ನು ಸಂಪರ್ಕಿಸಿ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನವನ್ನು ಕಾಂಗ್ರೆಸ್ ಶಾಸಕರು ಯಶಸ್ವಿಯಾಗಲು ಬಿಡುವುದಿಲ್ಲ. ಗೆಹ್ಲೋಟ್ ಸರ್ಕಾರ ಐದು ವರ್ಷಗಳ ಅವಧಿ ಪೂರೈಸುತ್ತದೆ ಎಂದೂ ಉಲ್ಲೇಖಿಸಲಾಗಿದೆ.
ಆದರೆ ಈ ಆರೋಪದ ಬಗ್ಗೆ ಬಿಜೆಪಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಜಂಟಿ ಹೇಳಿಕೆ ನೀಡಿರುವ 24 ಕೈ ಶಾಸಕರು:
ಕಲಾಖಾನ್ ಸಿಂಗ್ ಮೀನಾ, ಜೋಗೇಂದ್ರ ಸಿಂಗ್ ಅವನಾ, ಮುಖೇಶ್ ಭಕರ್, ಇಂದಿರಾ ಮೀನಾ, ವೇದ ಪ್ರಕಾಶ್ ಸೋಲಂಕಿ, ಸಂದೀಪ್ ಯಾದವ್, ಗಂಗಾ ದೇವಿ, ಹಕಮ್ ಅಲಿ, ವಾಜಿಬ್ ಅಲಿ, ಬಾಬುಲಾಲ್ ಬೈರ್ವಾ, ರೋಹಿತ್ ಬೋಹ್ರಾ, ಡ್ಯಾನಿಶ್ ಅಬ್ರಾರ್, ಚೇತನ್ ಡೂಡಿ, ಹರೀಶ್ ಮೀನಾ, ರಾಮ್ ನಿವಾಸ್ ಗವಾಡಿಯಾ, ಜಹಿದಾ ಖಾನ್, ಅಶೋಕ್ ಬೈರ್ವಾ, ಜೊಹ್ರಿ ಲಾಲ್ ಮೀನಾ, ಪ್ರಶಾಂತ್ ಬೈರ್ವಾ, ಶಕುಂತಲಾ ರಾವತ್, ರಾಜೇಂದ್ರ ಸಿಂಗ್ ಬಿಧುರಿ, ಗೋವಿಂದ್ ರಾಮ್ ಮೇಘವಾಲ್, ದೀಪ್ ಚಂದ್ ಖೇರಿಯಾ ಹಾಗೂ ರಾಜೇಂದ್ರ ಸಿಂಗ್ ಗುಧಾ.