ಜೈಪುರ: ರಾಜಸ್ಥಾನದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಅವರ ಗನ್ಮ್ಯಾನ್ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಆರ್‌ಟಿಡಿಸಿ) ನೌಕರರ ಕೋವಿಡ್-19 ವರದಿ ನೆಗೆಟಿವ್ ಎಂದು ಬಂದಿದ್ದರೂ, ಅದನ್ನು ಪಾಸಿಟಿವ್ ಎಂದು ತೋರಿಸಲಾಗಿದೆ. ಈ ವರದಿಯಿಂದ ಮಂಗಳವಾರ ಭರತ್‌ಪುರದಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು.
ಭರತ್‌ಪುರ ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯದ ಬಗ್ಗೆ ಸಚಿವ ವಿಶ್ವೇಂದ್ರ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಭರತ್‌ಪುರದಲ್ಲಿ ಕೊರೊನಾ ಪರೀಕ್ಷಾ ವರದಿಗಳನ್ನು ತೀವ್ರ ನಿರ್ಲಕ್ಷ್ಯದಿಂದ ನೀಡಲಾಗುತ್ತಿದೆ. ಎಸ್ಎಮ್ಎಸ್ ಆಸ್ಪತ್ರೆಯಲ್ಲಿ ನೆಗೆಟಿವ್ ಎಂದು ಬಂದ ವರದಿಗಳನ್ನು, ಭರತ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷಿಸಿದಾಗ ಪಾಸಿಟಿವ್ ಎಂದು ಬರುತ್ತಿವೆ. ಇದರಿಂದ ಜಿಲ್ಲಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಸಿಂಗ್ ಬರೆದಿದ್ದಾರೆ.
"ನನ್ನ ಭದ್ರತಾ ಸಿಬ್ಬಂದಿ ಮತ್ತು ಆರ್‌ಟಿಡಿಸಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇದೆ ಎಂದು ವರದಿ ನೀಡಲಾಗಿತ್ತು. ಮತ್ತೊಮ್ಮೆ ಜೈಪುರದ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ. ನಾನು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಈ ನಿರ್ಲಕ್ಷ್ಯವು ಬಹಿರಂಗವಾಯಿತು" ಎಂದು ಅವರು ತಮ್ಮ ಎರಡನೇ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.