ನವದೆಹಲಿ: ಲಾಕ್ಡೌನ್ನಿಂದ ಇದುವರೆಗೂ ಸ್ಥಗಿತವಾಗಿದ್ದ ಪ್ರಯಾಣಿಕ ರೈಲುಗಳ ಪೈಕಿ ವಿಶೇಷ ರೈಲುಗಳ ಓಡಾಟ ಶೀಘ್ರವೇ ಜನತೆಯ ಸೇವೆಗೆ ಲಭ್ಯವಾಗಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಜೂನ್ 1 ರಿಂದ ಎಸಿ ರಹಿತ 200 ವಿಶೇಷ ರೈಲುಗಳ ಸೇವೆ ಆರಂಭಿಸಲಾಗುವುದು. ಶೀಘ್ರವೇ ಬುಕ್ಕಿಂಗ್ ಪ್ರಕ್ರಿಯೆಗಳು ಸಹ ತೆರೆದುಕೊಳ್ಳಲಿವೆ ಎಂದರು. ಮೇ 1ರಿಂದ ವಲಸಿಗ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಲು ಶ್ರಮಿಕ್ ವಿಶೇಷ ರೈಲುಗಳ ಸೇವೆ ಕಲ್ಪಿಸಲಾಗಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪಿಯೂಷ್ ಗೋಯಲ್, ಇಂದು 200 ಶ್ರಮಿಕ್ ವಿಶೇಷ ರೈಲುಗಳು ಸಂಚರಿಸಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳ ಓಡಾಟ ಆರಂಭಿಸುತ್ತವೆ. ಇದು ವಲಸೆ ಕಾರ್ಮಿಕರಿಗೆ ತಮ್ಮ ಊರುಗಳತ್ತ ತೆರಳಲು ಸಹಕಾರಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರಗಳು ನೆರವು ನೀಡಬೇಕು. ಅಧಿಕ ಕಾರ್ಮಿಕರು, ಹೆಸರುಗಳನ್ನು ನೋಂದಣಿ ಮಾಡಿದರೆ ಹೆಚ್ಚು ಶ್ರಮಿಕ್ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈವರಿಗೆ ದೇಶಾದ್ಯಂತ 1,595 ಶ್ರಮಿಕ್ ರೈಲುಗಳು ವಿವಿಧ ರಾಜ್ಯಗಳಿಗೆ ಸಂಚರಿಸಿದ್ದು, 21 ಲಕ್ಷ ಪ್ರಯಾಣಿಕರು ತಮ್ಮ ಊರುಗಳಿಗೆ ತಲುಪಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾ ಪ್ರೇರಿತ ಲಾಕ್‌ಡೌನ್ ಹೇರಿದ ಪರಿಣಾಮ ಮಾರ್ಚ್ 25 ರಿಂದ ರೈಲ್ವೆ ಇಲಾಖೆಯು ವಿಶೇಷ ರೈಲುಗಳ ಸಂಚಾರ ಹೊರತುಪಡಿಸಿ ಎಲ್ಲ ಮಾದರಿಯ ರೈಲುಗಳ ಓಡಾಟ ರದ್ದುಪಡಿಸಿತ್ತು.