ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸ ವರ್ಷವನ್ನು ಆಚರಿಸಲು ವಿದೇಶಕ್ಕೆ ತೆರಳಿದ್ದು, ಮಹತ್ವದ ಸಂದರ್ಭಗಳಲ್ಲಿ ಸತತವಾಗಿ ಗೈರಾಗುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಆರೋಪಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿಗೆ ಎಲ್ಲಿಯಾದರೂ ಹೋಗಲು ಸಂಪೂರ್ಣ ಸ್ವಾತಂತ್ರ್ಯವಿದೆ. ಅವರ ವಿದೇಶ ಪ್ರವಾಸಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಮಹತ್ವದ ಸಂದರ್ಭಗಳಲ್ಲಿ ಅವರು ಗೈರಾಗುತ್ತಿದ್ದಾರೆ ಎಂದು ನೂಪುರ್ ಶರ್ಮಾ ಆರೋಪಿಸಿದ್ದರೆ.
ರಾಹುಲ್ ಗಾಂಧಿಗೆ ಭಾರತದ ಬಗ್ಗೆ ಹಾಗೂ ಇಲ್ಲಿನ ಜನತೆಯ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ರೈತರ ನಾಯಕ ಎಂದು ಕರೆದುಕೊಳ್ಳುವ ಅವರು ಕೃಷಿ ಮಸೂದೆಗಳು ಅಂಗೀಕಾರವಾಗುವ ವೇಳೆ ಸಂಸತ್ನಿಂದ ಹೊರನಡೆದರು. ಈಗ ರೈತರು ಪ್ರತಿಭಟನೆ ನಡೆಸುವ ವೇಳೆ ವಿದೇಶಕ್ಕೆ ಭೇಟಿ ನೀಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಿಲ್ಲಿಯವರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳುತ್ತಿದ್ದಾರೆ: ರಾಹುಲ್ಗೆ ಮೋದಿ ತಿರುಗೇಟು
2014ರಲ್ಲಿಯೂ ಕಾಂಗ್ರೆಸ್ ಸೋಲನ್ನಪ್ಪಿದ ಬಳಿಕ ಪಕ್ಷದ ಕಾರ್ಯಕರ್ತರು ದುಃಖಿತರಾಗಿರೂ, ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದರು. 2015ರಲ್ಲಿ ಆಗ್ನೇಯ ಏಷ್ಯಾದಲ್ಲಿ 60 ದಿನಗಳ ರಜೆಗಾಗಿ ಹೋದರು. 2016 ರ ಜೂನ್ನಲ್ಲಿ ಅವರ ಹುಟ್ಟುಹಬ್ಬ ಆಚರಿಸಲು ಟರ್ಕಿಗೆ ತೆರಳಿದ್ದರು. 2017ರಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಚುನಾವಣೆಗಳು ನಡೆದಾಗಲೂ ಅವರು ಇಂಗ್ಲೆಂಡಿನಲ್ಲಿದ್ದರು.
2019ರ ಅಕ್ಟೋಬರ್ನಲ್ಲಿ ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಗಳಿಗಿಂತ ಮೊದಲು ವಿದೇಶಕ್ಕೆ ತೆರಳಿದ್ದ ಅವರು ಈಗ ಹೊಸ ವರ್ಷಾಚರಣೆಗೆ ತೆರಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ 136ನೇ ಸಂಸ್ಥಾಪನಾ ವರ್ಷವನ್ನು ಆಚರಿಸುತ್ತಿರುವ ವೇಳೆಯೂ ಅವರು ವಿದೇಶಕ್ಕೆ ತೆರಳಿದ್ದು, ಕಾಂಗ್ರೆಸ್ ಪಕ್ಷದ ಕಡೆಗೆ ಅವರ ನಿರ್ಲಕ್ಷ್ಯವನ್ನು ಸೂಚಿಸುತ್ತದೆ. ದೇಶದ ಜನತೆ ವಿರೋಧ ಪಕ್ಷವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಆದರೆ ಕಾಂಗ್ರೆಸ್ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡಿದೆಯೇ ಎಂದು ನೂಪೂರ್ ಶರ್ಮಾ ಪ್ರಶ್ನಿಸಿದ್ದಾರೆ.