ನವದೆಹಲಿ : ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರ(ಆಶಾ) ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ರಾಹುಲ್ ಗಾಂಧಿ ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.
ಭಾರತವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರಿಗೆ ಸರಿಯಾದ ಸುರಕ್ಷತಾ ಸಲಕರಣೆ, ಸೂಕ್ತ ಭತ್ಯೆಯನ್ನೂ ನೀಡದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಹಿನ್ನೆಲೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್,'ಆಶಾ ಕಾರ್ಯಕರ್ತೆಯರು ದೇಶಾದ್ಯಂತ ಮನೆ ಮನೆಗೆ ತಲುಪಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಿಜವಾದ ಆರೋಗ್ಯ ಯೋಧರು. ಆದರೆ, ಇಂದು ಅವರು ತಮ್ಮ ಹಕ್ಕಿಗಾಗಿ ಮುಷ್ಕರ ನಡೆಸಬೇಕಾಗಿದೆ. ಇಷ್ಟುದಿನ ಸರ್ಕಾರ ಮೂಕವಾಗಿತ್ತು. ಆದರೆ, ಈಗ ಅದು ಕುರುಡು ಮತ್ತು ಕಿವುಡೂ ಕೂಡ ಆಗಿದೆ.' ಎಂದು ಕಿಡಿ ಕಾರಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 6 ಲಕ್ಷ ಆಶಾ ಕಾರ್ಯಕರ್ತೆಯರು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಯೋಚಿಸುತ್ತಿದ್ದಾರೆ.